ನಿರ್ದೇಶಕರಿಗೆ ತಾವು ಏನು ಹೇಳುವುದಕ್ಕೆ ಹೊರಟಿದ್ದೇವೆ ಎನ್ನುವ ಸ್ಪಷ್ಟತೆ ಮುಖ್ಯ | ಟಿ.ಎಸ್.ನಾಗಾಭರಣ
ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಸಿನಿ ಸಂವಾದ’ದ ‘ಸಮಕಾಲೀನ ಚಲನಚಿತ್ರರಂಗದ ಹಾಗೂ ಚಿತ್ರನಿರ್ಮಾಣದ ಸ್ಥಿತಿ-ಗತಿ’ ಗೋಷ್ಠಿಯಲ್ಲಿ ಹಿರಿಯ ಚಿತ್ರನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಮಾತನಾಡಿ, ‘ನಾವು ಯಾವುದೇ ರೀತಿಯ ಚಿತ್ರ ಮಾಡಿದರೂ, ಕಂಟೆಂಟ್ ಬಹಳ ಮುಖ್ಯ. ನಾವು ಏನು ಹೇಳುವುದಕ್ಕೆ ಹೊರಟಿದ್ದೀವಿ ಎನ್ನುವ ಸ್ಪಷ್ಟತೆ ಮುಖ್ಯ. ಯಾರು ಯಾವ ಜಾನರ್ ಚಿತ್ರವನ್ನು ಬೇಕಾದರೂ ಮಾಡಬಹುದು. ಅದರಲ್ಲಿ ಅವರಿಗೆ ಸ್ಪಷ್ಟತೆ ಇರಬೇಕು. ನಮಗೆ ನಮ್ಮ ಕಥೆ ಮತ್ತು ಚಿತ್ರದ ಬಗ್ಗೆ ನಂಬಿಕೆ ಇರಬೇಕು’ ಎಂದರು.
ನಾಗಾಭರಣ ಅವರ ನಿರ್ದೇಶನದ ‘ಮೈಸೂರು ಮಲ್ಲಿಗೆ’ ಕನ್ನಡದ ಮಹತ್ವದ ಚಿತ್ರಗಳಲ್ಲೊಂದು. ಈ ಚಿತ್ರ ರೂಪುಗೊಂಡ ಬಗೆಯನ್ನು ನೆನಪು ಮಾಡಿಕೊಂಡ ನಾಗಾಭರಣ ಅವರು, ‘ಈ ಚಿತ್ರ ಮಾಡಿದಾಗ, ಕಥೆ ಇರಲಿಲ್ಲ. ನರಸಿಂಹಸ್ವಾಮಿ ಅವರ ಕವನಗಳನ್ನಿಟ್ಟುಕೊಂಡು ಚಿತ್ರ ಮಾಡಬೇಕೆಂಬ ಯೋಚನೆ ಮಾತ್ರ ಇತ್ತು. ಆದರೆ, ಹೇಗೆ ಎಂಬುದು ಗೊತ್ತಿರಲಿಲ್ಲ. ನಾವು ಕಥೆ ಮಾಡಿ ನಾಲ್ವರು ಹಿರಿಯ ಸಾಹಿತಿಗಳಿಗೆ ಒಪ್ಪಿಸಬೇಕಿತ್ತು. ನಾವು ಮಾಡಿದ ಕಥೆ ಒಪ್ಪಿತವಾಗಿರಲಿಲ್ಲ. ಕೊನೆಗೆ ಕಥೆಯನ್ನು ಸ್ವಾತಂತ್ರ್ಯಕ್ಕೂ ಮುಂಚಿನ ಪರಿಸರದಲ್ಲಿ ಹೇಳಿದರೆ ಹೇಗೆ ಎಂದನಿಸಿ ಕಥೆ ಮಾಡಿದೆವು. ಆ ಕಥೆ ಎಲ್ಲರಿಗೂ ಇಷ್ಟವಾಯಿತು. ಹಾಗಾಗಿ, ಮೊದಲು ನಾವು ಸಿನಿಮಾ ಮಾಡುವುದಕ್ಕೆ ಮೊದಲು ಏನು ಮಾಡುತ್ತಿದ್ದೇವೆ ಎಂಬ ನಂಬಿಕೆ ಇರಬೇಕು’ ಎಂದು ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗೋಷ್ಠಿಯಲ್ಲಿ ನಟ, ಚಿತ್ರನಿರ್ಮಾಪಕ ಬಾಲಾಜಿ ವೀರಾಸ್ವಾಮಿ ಅವರು ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ, ”ನಾಗಾಭರಣ ಅವರು ಹೇಳಿದಂತೆ ಕಂಟೆಂಟ್ ಬಹಳ ಮುಖ್ಯ. ನಾವು ‘ನಾಗರಹಾವು’ ಮರುಬಿಡುಗಡೆ ಮಾಡಿದಾಗ, ಚಿತ್ರ ಬಿಡುಗಡೆಯಾಗಿ ಹಲವು ವರ್ಷಗಳಾಗಿದ್ದವು. ಚಿತ್ರ ಸಾಕಷ್ಟು ದೊಡ್ಡ ಹಿಟ್ ಆಗಿತ್ತು. ನಾವು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಸಿ ಚಿತ್ರವನ್ನು ಮರುಬಿಡುಗಡೆ ಮಾಡಿದೆವು. ಏನೇ ಮರುಸಿಂಗಾರ ಮಾಡಿದರೂ, ಕಥೆ ಬಹಳ ಮುಖ್ಯ. ಆ ಕಥೆ, ಚಿತ್ರ ಇಷ್ಟವಾಗಿದ್ದರಿಂದಲೇ ಜನ ಮತ್ತೊಮ್ಮೆ ಬಂದು ಚಿತ್ರ ನೋಡಿ ಗೆಲ್ಲಿಸಿದರು” ಎಂದರು. ಹಿರಿಯ ಸಿನಿಮಾ ಪತ್ರಕರ್ತ ಚೇತನ್ ನಾಡಿಗೇರ್ ಈ ಗೋಷ್ಠಿ ನಿರ್ವಹಿಸಿದರು.
