ನಿರ್ದೇಶಕ ಸಿನಿಮಾದ ಕ್ಯಾಪ್ಟನ್ ಆದ್ರೆ, ಸಿನಿಮಾಟೋಗ್ರಾಫರ್ ಸಿನಿಮಾದ ವೈಸ್ ಕ್ಯಾಪ್ಟನ್! | ಎಸ್.ಕೃಷ್ಣ
‘ನಿರ್ದೇಶಕರ ಕಲ್ಪನೆಯನ್ನು ತೆರೆಯ ಮೇಲೆ ತರುವವರು ಸಿನಿಮಾದ ಛಾಯಾಗ್ರಾಹಕರು. ಚಿತ್ರದ ಕಂಟೆಂಟ್, ಎಮೋಷನ್ಗಳನ್ನು ವಿಶ್ಯುಯೆಲ್ಸ್ಗಳ ಮೂಲಕ ಸಿನಿಮಾಟೋಗ್ರಾಫರ್ಸ್ ಪ್ರೇಕ್ಷಕರಿಗೆ ದಾಟಿಸುತ್ತಾರೆ. ಹಾಗಾಗಿ ನಿರ್ದೇಶಕ ಚಿತ್ರದ ಕ್ಯಾಪ್ಟನ್ ಆದ್ರೆ, ಸಿನಿಮಾಟೋಗ್ರಾಫರ್ ವೈಸ್ ಕ್ಯಾಪ್ಟನ್ ಇದ್ದ ಹಾಗೆ’ ಎಂದು ಖ್ಯಾತ ಸಿನಿಮಾ ಛಾಯಾಗ್ರಾಹಕ ಎಸ್.ಕೃಷ್ಣ ಅಭಿಪ್ರಾಯ ಪಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡಿರುವ ‘ಸಿನಿ ಸಂವಾದ’ದ ಎರಡನೇ ದಿನದ ಕಾರ್ಯಕ್ರಮದ ‘ನೆರಳು – ಬೆಳಕಿನ ನೋಟ’ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಚಿತ್ರರಂಗದ ಮೈಲುಗಲ್ಲು ಸಿನಿಮಾಗಳಲ್ಲೊಂದಾದ ‘ಮುಂಗಾರು ಮಳೆ’ ಸಿನಿಮಾದ ಛಾಯಾಗ್ರಾಹಕ ಎಸ್.ಕೃಷ್ಣ. ಇಪ್ಪತ್ತು ವರ್ಷಗಳ ಹಿಂದೆ ಚಿತ್ರಣಗೊಂಡ ಚಿತ್ರವಿದು. ಅಂದಿನ ಛಾಯಾಗ್ರಹಣದ ಮಿತಿ ಮತ್ತು ಸವಾಲುಗಳ ಬಗ್ಗೆ ಅವರು ಮಾತನಾಡುತ್ತಾ, ‘ತಂತ್ರಜ್ಞಾನ ಎಷ್ಟೇ ಬದಲಾದರೂ ಸ್ಟೋರಿ ಟೆಲ್ಲಿಂಗ್ ಬದಲಾಗೋಲ್ಲ. ನಾವು ಸೆರೆಹಿಡಿಯುವ ಪ್ರತೀ ಶಾಟ್ಗಳಿಗೆ ಒಂದು ಡೆಫನಿಷನ್ ಇರುತ್ತೆ. ನಿರ್ದೇಶಕ ಮತ್ತು ಛಾಯಾಗ್ರಾಹಕರ ಮಧ್ಯೆ ಪರಸ್ಪರ ನಂಬಿಕೆ ಇದ್ದಾಗ ಒಳ್ಳೆಯ ರಿಸಲ್ಟ್ ಸಾಧ್ಯ. ದಶಕಗಳ ಹಿಂದೆ ನಾವು ನೆಗೆಟೀವ್ನಲ್ಲಿ ಚಿತ್ರಿಸುವಾಗ ತುಂಬಾ ಮಿತಿಗಳಿದ್ದವು. ಬದಲಾದ ತಂತ್ರಜ್ಞಾನದಲ್ಲಿ ಸಾಕಷ್ಟು ಅನುಕೂಲಗಳು ಸಿಗುತ್ತಿವೆ. ಆದರೆ ಅಂತಿಮವಾಗಿ ಟೆಕ್ನಾಲಜಿ ನಮಗೆ ಒಂದು ಟೂಲ್ ಆಗಬೇಕಷ್ಟೆ’ ಎಂದರು.
ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾವಂತ ಸಿನಿಮಾ ಛಾಯಾಗ್ರಾಹಕ ಶೇಖರ್ ಚಂದ್ರ ಅವರೂ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿವಾಗಿ ಪಾಲ್ಗೊಂಡಿದ್ದರು. ವಿಶೇಷವಾಗಿ ಸಿನಿಮಾಟೋಗ್ರಫಿಯಲ್ಲಿನ ಲೈಟಿಂಗ್ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದ ಅವರು, ‘ನಿರ್ದೇಶಕರಿಗೆ ಕ್ಲಾರಿಟಿ ಇದ್ದಾಗ ಛಾಯಾಗ್ರಾಹಕರ ಕೆಲಸ ಸುಸೂತ್ರವಾಗಿ ನಡೆಯುತ್ತದೆ. ಸೆಟ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ಯಾಮೆರಾ, ಲೈಟ್ಸ್ ಇದ್ದಾಕ್ಷಣ ಚೆಂದದ ಸಿನಿಮಾ ಆಗುವುದಿಲ್ಲ. ಕತೆ, ಕಾನ್ಸೆಪ್ಟ್ಗೆ ಪೂರಕವಾಗಿ ಛಾಯಾಗ್ರಹಣ ಮಾಡಬೇಕು. ಪ್ರತೀ ಶಾಟ್ಗೆ ಲೈಟ್ಸ್ ಹಾಕಬೇಕಿಲ್ಲ. ಪಾತ್ರಗಳ ಮೂಡ್, ಲೊಕೇಶನ್, ಆರ್ಟಿಸ್ಟ್ ಮೂವ್ಮೆಂಟ್, ಆರ್ಟಿಸ್ಟ್ ಇಂಟರಾಕ್ಷನ್… ಹೀಗೆ ಸೆಟ್ನಲ್ಲಿ ಸಾಕಷ್ಟು ಅಂಶಗಳನ್ನು ಪರಿಗಣಿಸಿ ಕೆಲಸ ಮಾಡಬೇಕಾಗುತ್ತದೆ. ಎಲ್ಲಾ ಛಾಯಾಗ್ರಾಹಕರಿಗೂ ಅವರದ್ದೇ ಆದ ಒಂದು ಮೇಕಿಂಗ್ ಸ್ಟೈಲ್ ಇರುತ್ತದೆ. ಅದನ್ನು ಬಿಟ್ಟುಕೊಡಬಾರದು’ ಎಂದರು.
‘ಸಿನಿಮಾದ ಛಾಯಾಗ್ರಾಹಕ ಕೆಲವೊಮ್ಮೆ ಸೆಟ್ನಲ್ಲಿ ಮ್ಯಾನೇಜರ್ ಕೂಡ ಆಗಬೇಕಾಗುತ್ತದೆ. ಉದ್ದೇಶಿತ ಗುರಿ ಸಾಧಿಸಬೇಕೆಂದರೆ ಸಿನಿಮಾದ ಇತರೆ ವಿಭಾಗಗಳ ತಂತ್ರಜ್ಞರನ್ನು ನಿಭಾಯಿಸಿಕೊಂಡು ಹೋಗಬೇಕಾಗುತ್ತದೆ. ಹೊಸ ನಿರ್ದೇಶಕರಿದ್ದಾಗ ಇದು ತೀರಾ ಅಗತ್ಯ’ ಎನ್ನುವುದು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ‘ಕಾಂತಾರ’ ಖ್ಯಾತಿಯ ಸಿನಿಮಾಟೋಗ್ರಾಫರ್ ಅರವಿಂದ ಕಶ್ಯಪ್ ಅವರ ಮಾತು. ‘ಸಿನಿಮಾಟೋಗ್ರಫಿ ಸಿನಿಮಾದ ಬಜೆಟ್ಗೆ ಬರ್ಡನ್ ಆಗಬಾರದು. ಈಗ DI, VFX ಇದೆಯೆಂದು ಮೈಮರೆಯೋ ಹಾಗಿಲ್ಲ. ಶೇ.90% ರಷ್ಟು ಸೃಜನಶೀಲತೆಯನ್ನು ಕ್ಯಾಮೆರಾದಲ್ಲಿ ಅಚೀವ್ ಮಾಡಬೇಕು. ಟೆಕ್ನಾಲಜಿ ಯಾವತ್ತೂ ಕತೆ ಹೇಳೋದಿಕ್ಕೆ ಒಂದು ಟೂಲ್ ಆಗಬೇಕಷ್ಟೆ’ ಎಂದು ಛಾಯಾಗ್ರಾಹಕ ಎಸ್.ಕೃಷ್ಣ ಅವರ ಮಾತುಗಳನ್ನೇ ಅರವಿಂದ ಕಶ್ಯಪ್ ಅನುಮೋದಿಸಿದರು. ಚಿತ್ರನಿರ್ದೇಶಕ ಲಕ್ಕಿ ಶಂಕರ್ ಅವರು ‘ನೆರಳು – ಬೆಳಕಿನ ನೋಟ’ ಗೋಷ್ಠಿಯನ್ನು ನಿರ್ವಹಿಸಿದರು.
