ದಳಪತಿ ವಿಜಯ್ ಸಿನಿಜೀವನದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ಬಹು ನಿರೀಕ್ಷಿತ ‘ಜನ ನಾಯಕನ್’ ಜುಲೈ 23, 2026 ರಂದು ವಿಶ್ವದಾದ್ಯಂತ ಅದ್ದೂರಿ ಬಿಡುಗಡೆ
ದಳಪತಿ ವಿಜಯ್ ಅಭಿನಯದ, ಅವರ ಸಿನಿ ಜೀವನದ ಕೊನೆಯ ಚಿತ್ರವೆಂದು ಹೇಳಲಾಗುತ್ತಿರುವ ಬಹು ನಿರೀಕ್ಷಿತ ‘ಜನ ನಾಯಕನ್’ ವಿಶ್ವದಾದ್ಯಂತ 2026ರ ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರಾದ ಕೆ.ವಿ.ಎನ್ ಸಂಸ್ಥೆಯ ವೆಂಕಟ್ ಕೆ ನಾರಾಯಣ್ ಅಧಿಕೃತವಾಗಿ ಘೋಷಿಸಿದ್ದಾರೆ.
ಭಾರತೀಯ ಸಿನಿರಂಗದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಜನ ನಾಯಕನ್’, ದಳಪತಿ ವಿಜಯ್ ಅವರ ಅದ್ಭುತ ಸಿನಿ ಪಯಣದ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ವಿಶ್ವದಾದ್ಯಂತದ ಅಭಿಮಾನಿಗಳು ಅವರ ಕೊನೆಯ ಚಿತ್ರವನ್ನು ಕಾತುರದಿಂದ ಕಾಯುತ್ತಿರುವ ಈ ಸಂದರ್ಭದಲ್ಲಿ, ಈ ಸಿನಿಮಾ ಅವರ ಅಪ್ರತಿಮ ಸಿನಿ ಜೀವನಕ್ಕೆ ಸೂಕ್ತ ಗೌರವ ಸಲ್ಲಿಸುವ ಚಿತ್ರವಾಗಲಿದೆ.
ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ಕೆ. ನಾರಾಯಣ ನಿರ್ಮಿಸಿದ್ದಾರೆ. ಅತ್ಯುತ್ತಮ ತಾಂತ್ರಿಕ ಹಾಗೂ ಸೃಜನಾತ್ಮಕ ತಂಡದೊಂದಿಗೆ ಈ ಚಿತ್ರ ಭವ್ಯವಾದ ಸಿನಿ ಅನುಭವವನ್ನು ನೀಡುವ ಭರವಸೆ ಹೊಂದಿದೆ.
ಈ ಕುರಿತು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರು ಹೇಳಿದ್ದು:
“ಸಿನಿಮಾ ಇತಿಹಾಸದಲ್ಲಿ ಕೆಲವೇ ಕೆಲವು ಕ್ಷಣಗಳು ನಿಜವಾಗಿಯೂ ಐತಿಹಾಸಿಕವಾಗಿರುತ್ತವೆ. ‘ಜನ ನಾಯಕನ್’ ಅಂತಹ ಒಂದು ವಿಶೇಷ ಕ್ಷಣವಾಗಿದೆ. ದಳಪತಿ ವಿಜಯ್ ಅವರ ಕೊನೆಯ ಚಿತ್ರವನ್ನು ಜಗತ್ತಿನಾದ್ಯಂತದ ಅಭಿಮಾನಿಗಳಿಗೆ ತಲುಪಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಸಿನಿಮಾದಿಂದ ಆರಂಭವಾದ ಅವರ ಪಯಣ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದು, ಅಂತಿಮವಾಗಿ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುವವರೆಗೆ ಬೆಳೆದಿರುವುದು ಜನರೊಂದಿಗೆ ಅವರಿಗಿರುವ ಅಪೂರ್ವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ‘ಜನ ನಾಯಕನ್’ ಅವರ ಅದ್ಭುತ ಸಿನಿ ಪಯಣಕ್ಕೆ ಅತ್ಯುತ್ತಮ ಗೌರವ ಸಲ್ಲಿಸುವ, ಮರೆಯಲಾಗದ ಚಿತ್ರಮಂದಿರದ ಅನುಭವವಾಗಲಿದೆ ಎಂಬ ವಿಶ್ವಾಸ ನಮ್ಮದು.”»
ಈ ಬಿಡುಗಡೆ ಘೋಷಣೆಯೊಂದಿಗೆ, ಈ ವರ್ಷದ ಅತಿದೊಡ್ಡ ಚಿತ್ರಮಂದಿರದ ಸಂಭ್ರಮವೊಂದಕ್ಕೆ ವೇದಿಕೆ ಸಿದ್ಧವಾಗಿದೆ. ದಳಪತಿ ವಿಜಯ್ ಅವರ ನಾಯಕನಾಗಿ ಕೊನೆಯ ಅಧ್ಯಾಯವನ್ನು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಅದ್ಧೂರಿಯಾಗಿ ಸಂಭ್ರಮಿಸಲು ಸಜ್ಜಾಗಿದ್ದಾರೆ.
