*ಅರ್ಮಾನ್ ಮಲ್ಲಿಕ್ ಕಂಠಸಿರಿಯಲ್ಲಿ “ರಾಶಿ” ಹಾಡು .
ಮೊದಲ ಹಾಡಿನಲ್ಲೇ ಮೋಡಿ ಮಾಡಿದೆ ಆದಿತ್ಯ ಶಶಿಕುಮಾರ್ ಅಭಿನಯದ ಈ ಚಿತ್ರ .
ಧುವನ್ ಫಿಲಂಸ್ ಲಾಂಛನದಲ್ಲಿ ಅಖಿಲೇಶ್ ಎಂ ಅವರು ನಿರ್ಮಿಸಿರುವ , ವಿಜಯ್ ಪಾಳೇಗಾರ್ ನಿರ್ದೇಶಿಸಿರುವ ಹಾಗೂ ಸುಪ್ರೀಂ ಹೀರೋ ಶಶಿಕುಮಾರ್ ಅವರ ಪುತ್ರ ಆದಿತ್ಯ ಶಶಿಕುಮಾರ್ ನಾಯಕನಾಗಿ ನಟಿಸಿರುವ “ರಾಶಿ” ಚಿತ್ರದ ಮೊದಲ ಹಾಡು “ಮೊದಲ ಪ್ರೀತಿ” ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯ್ ಪಾಳೇಗಾರ್ ಅವರೆ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡಿದ್ದಾರೆ. ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಆದಿತ್ಯ ಶಶಿಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆದಿತ್ಯ ಅವರು ಸಹ ಅವರ ತಂದೆ ಶಶಿಕುಮಾರ್ ಅವರ ಹಾಗೆ ಉತ್ತಮ ನೃತ್ಯಗಾರ. ಆದಿತ್ಯ ಅವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಆಗುವುದಂತು ಖಂಡಿತ. ಹೆಸರಾಂತ ಡಿ ಬಿಟ್ಸ್ ಕಂಪನಿಯ ಮೂಲಕ ಈ ಹಾಡು ಬಿಡುಗಡೆಯಾಗಿದ್ದು, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ. ಚಿತ್ರದಲ್ಲಿ ಒಟ್ಟು ಆರು ಗೀತೆಗಳಿದೆ. ಆ ಪೈಕಿ ಐದು ಚಿತ್ರದಲ್ಲಿದ್ದು, ಒಂದು ಪ್ರಚಾರಗೀತೆಯಾಗಿರಲಿದೆ. ಕುನಾಲ್ ಗಾಂಜಾವಾಲ, ವಿಜಯ್ ಯೇಸುದಾಸ್, ಅನುರಾಧಾ ಭಟ್, ಶರಣ್, ಮಳವಳ್ಳಿ ಮಹದೇಸ್ವಾಮಿ, “ಸಿಟಿ ಲೈಟ್ಸ್”, “ಭಾವ ಭಾವ” ಖ್ಯಾತಿಯ ಅಂಕಿತ್ ಮುಂತಾದವರು ಹಾಡುಗಳನ್ನು ಹಾಡಿದ್ದಾರೆ.

ಈಗಾಗಲೇ ಚಿತ್ರೀಕರಣ ಪೂರೈಸಿ ತೆರೆಗೆ ಬರಲು ಅಣಿಯಾಗುತ್ತಿರುವ ಈ ಚಿತ್ರವನ್ನು ಅಖಿಲೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ಮಾಪಕ ಅಖಿಲೇಶ್ ಕಥೆ ಬರೆದಿದ್ದಾರೆ. ಚಿತ್ರಕಥೆ ನಿರ್ದೇಶಕರದು. ನವೀನ್ ಸೂರ್ಯ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಮಹೇಶ್ ಸಾತನೂರು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಆದಿತ್ಯ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಸಮೀಕ್ಷ ನಟಿಸಿದ್ದಾರೆ. ರಮೇಶ್ ಇಂದಿರಾ, ತಬಲ ನಾಣಿ, ವೀಣಾ ಸುಂದರ್, ಮಂಜು ಪಾವಗಡ, ಕರಿ ಸುಬ್ಬು, ವಿನೋದ್ ಗೊಬ್ಬರಗಾಲ, ಹುಲಿ ಕಾರ್ತಿಕ್, ವರ್ಧನ್ ತೀರ್ಥಹಳ್ಳಿ, ಉಗ್ರಂ ರವಿ, ಭಜರಂಗಿ ಪ್ರಸನ್ನ ಮುಂತಾದವರು “ರಾಶಿ” ಚಿತ್ರದ ತಾರಾಬಳಗದಲ್ಲಿದ್ದಾರೆ.
