“ಕಾರ್ ಕಾರ್” ಎಂಬ ಸೂಪರ್ ಹಿಟ್ ಹಾಡು ಕೊಟ್ಟವರಿಂದ ಈಗ “ರನ್ ರನ್” ಹಾಡು. ” ..
” ಅಮೇರಿಕಾ ಅಮೇರಿಕಾ” TO “ಅಮೇರಿಕಾ ಅಮೇರಿಕಾ 2″ವರೆಗಿನ ಸ್ನೇಹ ಹಾಗೂ ಸಂಗೀತ ಪಯಣದ ಮೆಲಕು ಹಾಕಿದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ.
ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಸೆಪ್ಟೆಂಬರ್ 11 ರಂದು ತೆರೆಗೆ .
90 ರ ದಶಕದ ಸೂಪರ್ ಹಿಟ್ ಚಿತ್ರ “ಅಮೇರಿಕಾ ಅಮೇರಿಕಾ “. ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಈ ಚಿತ್ರದ ಮೂಲಕ ಅನಿವಾಸಿ ಭಾರತೀಯ ಮನೋಮೂರ್ತಿ ಎಂಬ ಸಂಗೀತ ನಿರ್ದೇಶಕನ ಉದಯವಾಯಿತು. ಈ ಚಿತ್ರ, ಕಥೆಯ ಜೊತೆಗೆ ಹಾಡುಗಳಿಂದ ಇಂದಿಗೂ ಜನಪ್ರಿಯ. “ನೂರು ಜನುಮಕ್ಕೂ”, ” ಯಾವ ಮೋಹನ ಮುರಳಿ ಕರೆಯಿತು”, “ಹೇಗಿದೆ ನಮ್ ದೇಶ” ಮುಂತಾದ ಹಾಡುಗಳು ಇಂದಿಗೂ ಎಲ್ಲರ ಬಾಯಲ್ಲೂ ಇದೆ. ಆನಂತರ “ಅಮೃತಧಾರೆ”ಯ “ನೀ ಅಮೃತಧಾರೆ”, “ನನ್ನ ಪ್ರೀತಿಯ ಹುಡುಗಿ” ಚಿತ್ರದ “ಕಾರ್ ಕಾರ್ ಎಲ್ಲೋಡಿ ಕಾರ್”, “ಮಾತಾಡ್ ಮಾತಾಡ್ ಮಲ್ಲಿಗೆ” ಚಿತ್ರದ “ಝಣ ಝಣ ಕಾಂಚನದಲ್ಲಿ” ಹಾಡುಗಳು ಇಂದಿಗೂ ಎಲ್ಲರು ಗುನಗುವಂತ ಸುಮಧುರ ಹಾಡುಗಳು. “ಅಮೇರಿಕಾ ಅಮೇರಿಕಾ” ದಿಂದ “ಒಲವೇ ಜೀವನ ಲೆಕ್ಕಾಚಾರ” ದ ತನಕ ನಾಗತಿಹಳ್ಳಿ ಚಂದ್ರಶೇಖರ ಅವರ ಆರು ಚಿತ್ರಗಳಿಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಅಮೇರಿಕಾ ಅಮೇರಿಕಾ ೨” ಈ ಜೋಡಿಯ ಕಾಂಬಿನೇಶನ್ ನಲ್ಲಿ ಬರುತ್ತಿರುವ ಏಳನೇ ಚಿತ್ರ. “ಅಮೇರಿಕಾ ಅಮೇರಿಕಾ ೨” ಚಿತ್ರದ ಮೊದಲ ಗೀತೆ “ರನ್ ರನ್” ಹಾಡು ಬಿಡುಗಡೆಯಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರೆ ಬರೆದಿರುವ ಈ ಹಾಡನ್ನು ಶಂಕರ್ ಮಹದೇವನ್ ಹಾಗೂ ಶ್ರೇಯಾ ಘೋಷಾಲ್ ಹಾಡಿದ್ದಾರೆ. ಹೆಸರಾಂತ ಲೇಖಕ ಹಾಗೂ ಸಂಪಾದಕರಾದ ಜೋಗಿ ಅವರು ಈ ಹಾಡನ್ನು ಅನಾವರಣ ಮಾಡಿ ಚಿತ್ರಕ್ಕೆ ಯಶಸ್ಸನ್ನು ಕೋರಿದರು. ಹಾಡು ಬಿಡುಗಡೆಗೂ ಮುನ್ನ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸಂಗೀತ ನಿರ್ದೇಶಕ ಮನೋಮೂರ್ತಿ ತಮ್ಮ ಸ್ನೇಹ – ಸಂಗೀತಪಯಣದ ಮೆಲಕು ಹಾಕಿದರು. ಅವರಿಬ್ಬರ ಕಾಂಬಿನೇಶನ್ ನಲ್ಲಿ ಬಂದಿರುವ ಏಳು ಚಿತ್ರಗಳ ಸೂಪರ್ ಹಿಟ್ ಹಾಡುಗಳ ವಿಶೇಷತೆಯನ್ನು ವಿಸ್ತಾರವಾಗಿ ವಿವರಿಸಿದರು. ಇದೊಂದು ವಿಭಿನ್ನವಾದ ಪತ್ರಿಕಾಗೋಷ್ಠಿಯಾಗಿತ್ತು.

ಹಾಡು ಬಿಡುಗಡೆಯ ಜೊತೆಗೆ ಚಿತ್ರ ಬಿಡುಗಡೆಯ ದಿನಾಂಕವನ್ನು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು. ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಚಿತ್ರದ ಬಿಡುಗಡೆಯ ದಿನಾಂಕ ರಿವಿಲ್ ಮಾಡಿದರು. ಹಿರಿಯ ಪತ್ರಕರ್ತ ಸುಬ್ರಹ್ಮಣ್ಯ, ಸುನಯನ ಸುರೇಶ್, ಕಿಂಗ್ಸ್ ಕ್ಲಬ್ ನ ಮಾಲೀಕರಾದ ರವಿಕುಮಾರ್, “ಅಮೇರಿಕಾ ಅಮೇರಿಕಾ ೨” ಚಿತ್ರದ ನಾಯಕನಟರಲೊಬ್ಬರಾದ ಪೃಥ್ವಿ ಅಂಬರ್, ನಾಯಕಿ ಶಾನ್ವಿ ಶ್ರೀವಾಸ್ತವ್, ಸಂಕಲನಕಾರ ಶ್ರೀ ಕ್ರೇಜಿಮೈಂಡ್ಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿರೂಪ್ ಭಂಡಾರಿ ಅವರು ಈ ಚಿತ್ರದ ಮತ್ತೊಬ್ಬ ನಾಯಕ. ಸೆಪ್ಟೆಂಬರ್ 11 ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡಿಗರಿರುವ ವಿಶ್ವದ ಬಹತೇಕ ಕಡೆ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಕರ್ನಾಟಕದಲ್ಲಿ ಹೆಸರಾಂತ ಕೆ.ವಿ.ಎನ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕ “ಅಮೇರಿಕಾ ಅಮೇರಿಕಾ ೨” ನಿರ್ಮಾಣವಾಗಿದೆ.
