ಆಕಾಶ ಪಿಕ್ಚರ್ಸ್ ನಿರ್ಮಾಣದ “ಮಹಾನ್” ಚಿತ್ರದ ದುರ್ಗಾ ಪಾತ್ರದಲ್ಲಿ ಖ್ಯಾತ ನಟಿ ವರ್ಷ ಬೊಳ್ಳಮ್ಮ

ಫಸ್ಟ್ ಲುಕ್ ಬಿಡುಗಡೆ ಮಾಡಿದ ಚಿತ್ರತಂಡ ದಕ್ಷಿಣ ಭಾರತದ ಖ್ಯಾತ ನಟಿ ವರ್ಷ ಬೊಳ್ಳಮ್ಮ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಕನ್ನಡದವರೇ ಆಗಿರುವ ವರ್ಷ, ಕೊಡಗಿನವರು. ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಗಳಿಸಿರುವ ಅವರು, ಇದೀಗ ಆಕಾಶ ಪಿಕ್ಚರ್ಸ್ ನಿರ್ಮಾಣದ “ಮಹಾನ್” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ವರ್ಷ ಬೊಳ್ಳಮ್ಮ ಅವರ ಮಹಾನ್ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.

ಸಿನಿಮಾ ಕೇವಲ ಮನರಂಜನೆಗೆ ಸೀಮಿತವಲ್ಲ; ಅದು ಸಮಾಜವನ್ನು ಸಂಪರ್ಕಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ಆಕಾಶ ಪಿಕ್ಚರ್ಸ್ ನಿರ್ಮಾಣದ ‘ಮಹಾನ್’ ಚಿತ್ರದ ಮೂಲಕ ದೇಶದ ಪ್ರತಿಯೊಬ್ಬ ರೈತನ ಪರಿಶ್ರಮ, ಹೋರಾಟ ಮತ್ತು ಬದುಕಿಗೆ ಗೌರವ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. “ಈ ಕಥೆಯನ್ನು ಅತ್ಯುನ್ನತ ಮಟ್ಟದಲ್ಲಿ ಪ್ರೇಕ್ಷಕರ ಮುಂದೆ ತರುವ ಉದ್ದೇಶದಿಂದ ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದರು ಮತ್ತು ಅನುಭವಸಂಪನ್ನ ತಾಂತ್ರಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ್ದೇವೆ. ‘ಮಹಾನ್’ ಪ್ರತಿಯೊಬ್ಬ ಅನ್ನದಾತನಿಗೆ ನಮ್ಮ ಹೃದಯಪೂರ್ವಕ ನಮನ. ಶಿವರಾಜಕುಮಾರ್, ವಿಜಯ್ ರಾಘವೇಂದ್ರ, ರಾಧಿಕಾ ಚೇತನ್, ಕಿರಣ್ ಶ್ರೀನಿವಾಸ್, ದೇವರಾಜ್, ರಂಗಾಯಣ ರಘು, ಮಿತ್ರ, ಶರತ್ ಲೋಹಿತಾಶ್ವ, ಅವಿನಾಶ್, ನಮ್ರತಾ ಗೌಡ, ರಮೇಶ್ ಇಂದಿರ ಅವರಂತಹ ಅನುಭವಿ ಹಾಗೂ ಹಿರಿಯ ಕಲಾವಿದರ ತಾರಾಬಳಗವಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಖ್ಯಾತ ನಟಿ ವರ್ಷ ಬೊಳ್ಳಮ್ಮ ಅವರು ಅಭಿನಯಿಸಿರುವುದು ನಮಗೆ ಅಪಾರ ಸಂತಸ ತಂದಿದೆ” ಎಂದು ಆಕಾಶ ಪಿಕ್ಚರ್ಸ್ ಸಂಸ್ಥೆಯ ನಿರ್ಮಾಪಕ ಪ್ರಕಾಶ್ ಎಸ್. ಬೂದೂರು ಹೇಳಿದರು.

‘ಮಹಾನ್’ ಚಿತ್ರದ ದುರ್ಗಾ ಪಾತ್ರವು ಭಾರತೀಯ ಕೃಷಿಯಲ್ಲಿ ಮಹಿಳೆಯರ ಮಹತ್ವವನ್ನು ಸಾರುತ್ತದೆ. ಇಂದಿನ ಹೊಸ ತಲೆಮಾರಿನ ರೈತೆಯರ ಪ್ರತೀಕವಾದ ದುರ್ಗಾ ಪಾತ್ರದಲ್ಲಿ ವರ್ಷ ಬೊಳ್ಳಮ್ಮ ಅಭಿನಯಿಸಿದ್ದಾರೆ. ದುರ್ಗಾ ವಿದ್ಯಾವಂತೆ, ಆತ್ಮವಿಶ್ವಾಸಿ ಹಾಗೂ ಪ್ರಗತಿಪರ ರೈತೆಯಾಗಿದ್ದು, ಆಧುನಿಕ ತಂತ್ರಜ್ಞಾನವನ್ನು ಪ್ರಕೃತಿಯೊಂದಿಗೆ ಸಮನ್ವಯಗೊಳಿಸಿ ಸುಸ್ಥಿರ ಕೃಷಿಗೆ ಉತ್ತೇಜನ ನೀಡುವ ವ್ಯಕ್ತಿತ್ವ ಹೊಂದಿದ್ದಾಳೆ. ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಹಾಗೂ ಯುವಜನರನ್ನು ಕೃಷಿಯತ್ತ ಆಕರ್ಷಿಸುವ ಸಂದೇಶವನ್ನು ಈ ಪಾತ್ರ ಪರಿಣಾಮಕಾರಿಯಾಗಿ ಸಾರುತ್ತದೆ.ಸಿನಿಮಾ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ಆಶಯವನ್ನು ದುರ್ಗಾ ಪಾತ್ರ ಪ್ರತಿಬಿಂಬಿಸುತ್ತದೆ. ಕೃಷಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದರೂ, ಅವರಿಗೆ ಸಿಗಬೇಕಾದ ಮಾನ್ಯತೆ ಇನ್ನೂ ಸಂಪೂರ್ಣವಾಗಿ ದೊರಕಿಲ್ಲ. ಅವರಿಗೆ ಸೂಕ್ತ ಗೌರವ ಹಾಗೂ ಪ್ರಾಮುಖ್ಯತೆ ದೊರಕಬೇಕು ಎಂಬ ಉದ್ದೇಶದಿಂದ ಈ ಪಾತ್ರವನ್ನು ರೂಪಿಸಲಾಗಿದೆ.“ಈ ಪಾತ್ರ ವಿದ್ಯಾವಂತ ಯುವತಿಯರಿಗೆ ಖಂಡಿತವಾಗಿಯೂ ಸ್ಫೂರ್ತಿಯಾಗುತ್ತದೆ ಎಂಬ ನಂಬಿಕೆ ನನಗಿದೆ. ಜ್ಞಾನ, ಆತ್ಮವಿಶ್ವಾಸ ಹಾಗೂ ನಾಯಕತ್ವದೊಂದಿಗೆ ಕೃಷಿ ಕ್ಷೇತ್ರದಲ್ಲಿ ಹೊಸ ದಾರಿಯನ್ನು ನಿರ್ಮಿಸಬಹುದು ಎಂಬ ವಿಶ್ವಾಸವನ್ನು ಈ ಪಾತ್ರ ಮೂಡಿಸಲಿದೆ” ಎಂದು ನಿರ್ದೇಶಕ ಪಿ. ಸಿ. ಶೇಖರ್ ತಿಳಿಸಿದ್ದಾರೆ.

“ಪ್ರಾರಂಭದಿಂದಲೂ ನನಗೆ ಪರಭಾಷೆಯ ಚಿತ್ರಗಳಲ್ಲೇ ಹೆಚ್ಚಿನ ಅವಕಾಶಗಳು ಬಂದಿದ್ದವು. ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ನನ್ನ ತಾಯ್ನಾಡಿನಲ್ಲಿ, ಕನ್ನಡದ ಸಿನಿಮಾದಲ್ಲಿ ನಟಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ. ಅದರಲ್ಲೂ ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಅವರಂತಹ ಅದ್ಭುತ ಕಲಾವಿದರೊಂದಿಗೆ ಅಭಿನಯಿಸಿರುವುದು ನನ್ನ ಪಾಲಿನ ದೊಡ್ಡ ಸಂತಸ. ಮಹಾನ್ ಚಿತ್ರದಲ್ಲಿನ ನನ್ನ ಪಾತ್ರ ಬಹಳ ವಿಶೇಷವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಅವಕಾಶ ನೀಡಿದ ನಿರ್ದೇಶಕ ಪಿ. ಸಿ. ಶೇಖರ್ ಅವರಿಗೆ ಹಾಗೂ ಈ ಅದ್ಭುತ ಚಿತ್ರವನ್ನು ನಿರ್ಮಿಸುತ್ತಿರುವ ಆಕಾಶ ಪಿಕ್ಚರ್ಸ್ ಸಂಸ್ಥೆಗೆ ನಾನು ಸದಾ ಚಿರಋಣಿಯಾಗಿರುತ್ತೇನೆ” ಎಂದು ವರ್ಷ ಬೊಳ್ಳಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted