ಜುಲೈ 24 ರಿಂದ ಚಿತ್ರಮಂದಿರಗಳಲ್ಲಿ “ಪಿಚ್ಚರ್”..
ಈಗಾಗಲೇ ಹಾಡುಗಳ ಮೂಲಕ ಜನಪ್ರಿಯವಾಗಿದೆ ಶಿಲ್ಪಾ ಗಣೇಶ್ ನಿರ್ಮಾಣದ ಈ ಚಿತ್ರ .
ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಪ್ರಸ್ತುತ ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಿಸಿರುವ “ಪಿಚ್ಚರ್” ಚಿತ್ರ ಇದೇ ಜುಲೈ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಂದೀಪ ಬೆದ್ರ ನಿರ್ದೇಶನದ ಈ ಚಿತ್ರದ ನಾಯಕರಾಗಿ ನಿತ್ಯಪ್ರಕಾಶ್ ಬಂಟ್ವಾಳ್ ನಟಿಸಿದ್ದಾರೆ. ಅಮೃತ ಸುದು ಈ ಚಿತ್ರದ ನಾಯಕಿ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಮ್ಮ ಗೋಲ್ಡನ್ ಮೂವೀಸ್ ಸಂಸ್ಥೆಯ ಮೂಲಕ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿದ್ದೇವೆ. ನೀವು ಮಂಗಳೂರಿನವರು. ತುಳು ಸಿನಿಮಾವೊಂದನ್ನು ನಿರ್ಮಾಣ ಮಾಡಿ ಎಂದು ಸ್ನೇಹಿತರು ಹೇಳುತ್ತಿದ್ದರು. ಒಳ್ಳೆಯ ಕಥೆ ಸಿಕ್ಕರೆ ಮಾಡೋಣ ಅಂತ ಹೇಳಿದ್ದೆ. ಕಾರ್ಯಕಾರಿ ನಿರ್ಮಾಪಕರಾದ ಮೋಹನ್ ಭಟ್ಕಳ್ ಅವರು ನಿರ್ದೇಶಕ ಸಂದೀಪ್ ಬೆದ್ರ ಅವರನ್ನು ಪರಿಚಯ ಮಾಡಿಕೊಟ್ಟರು. ಸಂದೀಪ್ ಅವರು ಈ ಚಿತ್ರದ ಕಥೆ ಹೇಳಿದಾಗ, ಕೇಳುತ್ತಲೆ ಇಷ್ಟವಾಯಿತು. ಗಣೇಶ್ ಅವರಿಗೂ ಈ ವಿಷಯ ಹೇಳಿದೆ. ಅವರು ಕೂಡ ನಿರ್ಮಾಣ ಮಾಡೋಣ ಅಂತ ಹೇಳಿದರು. ಕಡಿಮೆ ಬಜೆಟ್ ನಲ್ಲಿ ನಿರ್ಮಾಣ ಮಾಡಲು ಹೊರಟ ಚಿತ್ರವಿದು. ಆದರೆ ಮುಗಿಯುವ ವೇಳೆಗೆ ಬಿಗ್ ಬಜೆಟ್ ನ ಚಿತ್ರವಾಗಿದೆ. ಇಲ್ಲಿಯವರೆಗೂ ತುಳು ಚಿತ್ರದ ಚಿತ್ರೀಕರಣ ಕಾಶ್ಮೀರದಲ್ಲಿ ಆಗಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಚಿತ್ರದ ಹಾಡೊಂದರ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಇನ್ನೊಂದು ವಿಶೇಷ ಎಂದರೆ ನಾನು ಮೊದಲ ಬಾರಿಗೆ ಈ ಚಿತ್ರದ “ಗೋಕುಲದ ರಾಧೆ” ಎಂಬ ಹಾಡನ್ನು ಹಾಡಿದ್ದೇನೆ. ಮೇಲ್ ವರ್ಷನ್ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಈ ಹಾಡಿಗೆ ಮೆಚ್ಚುಗೆ ದೊರಕುತ್ತಿದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆ ಕೌಟುಂಬಿಕ ಚಿತ್ರ ಕನ್ನಡ ಹಾಗೂ ತುಳುವಿನಲ್ಲಿ ನಿರ್ಮಾಣವಾಗಿ ಜುಲೈ 24 ರಂದು ನಿಮ್ಮ ಮುಂದೆ ಬರಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ನಿರ್ಮಾಪಕಿ ಶಿಲ್ಪಾ ಗಣೇಶ್ ತಿಳಿಸಿದರು.
ನಾನು, ನನ್ನ ಅಭಿನಯದ ಚಿತ್ರಗಳ ಅಥವಾ ಅತಿಥಿಯಾಗಿ ಬಂದ ಚಿತ್ರಗಳ ಪತ್ರಿಕಾಗೋಷ್ಠಿಯಲ್ಲಿ ಮಾತ್ರ ಭಾಗವಹಿಸಿತ್ತಿದ್ದೆ. ಈಗ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಚಿತ್ರವನ್ನು ಪ್ರತಿನಿಧಿಸುತ್ತಾ ಈ ಪತ್ರಿಕಾಗೋಷ್ಠಿಗೆ ಬಂದಿದ್ದೇನೆ. ಶಿಲ್ಪಾ ಅವರು ಹೇಳಿದ ಹಾಗೆ ಸಂದೀಪ್ ಬೆದ್ರ ಒಂದೊಳ್ಳೆ ಕಥೆ ಬರೆದಿದ್ದಾರೆ. ಇದೊಂದು ಅವಿಭಕ್ತ ಕುಟುಂಬದ ಕಥೆಯೂ ಹೌದು. ಇದರ ಜೊತೆಗೆ ಎಮೋಷನ್, ಸೆಂಟಿಮೆಂಟ್, ಕಾಮಿಡಿ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನನಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿರುವುದರಿಂದ ನಾನು ಕೌಟುಂಬಿಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಡುತ್ತೇನೆ. ಇನ್ನೂ, ಮಂಗಳೂರಿನ ಹೆಸರಾಂತ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್ , ಭೋಜರಾಜ್ ವಾಮಂಜೂರ್, ನವೀನ್ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ಅಮೃತ ಸುದು ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಸ್ಯಾಮುಯೆಲ್ ಅಭಿ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ – ಚಂದ್ರಶೇಖರ್ ಕೆ.ಎಸ್ ಛಾಯಾಗ್ರಹಣ, ಜಸ್ಕರಣ್ ಸಿಂಗ್, ಶಿಲ್ಪಾ, ಹರಿಕೃಷ್ಣ, ಜೆಸ್ಸಿಗಿಫ್ಟ್ ಮುಂತಾದವರ ಗಾಯನ ಹಾಗೂ ಸಿಂಪಲ್ ಸುನಿ, ಅನೂಪ್ ಭಂಡಾರಿ, ಅರಸು ಅಂತಾರೆ, ಚೇತನ್ ಕುಮಾರ್ ಮುಂತಾದವರ ಗೀತರಚನೆ “ಪಿಚ್ಚರ್” ಅನ್ನು ಮತ್ತಷ್ಟು ಚಂದಗಾಣಿಸಿದೆ. ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ನಾನು ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್ .
ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಹಾಗೂ ನಾಯಕಿ ಅಮೃತ ಸುದು ತಮ್ಮ ಪಾತ್ರದ ಕುರಿತು ಮಾತನಾಡಿದರು. ನಿರ್ದೇಶಕ ಸಂದೀಪ್ ಬೆದ್ರ “ಪಿಚ್ಚರ್” ಸಾಗಿ ಬಂದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ಚಂದ್ರಶೇಖರ್ ಕೆ.ಎಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

