*ಅಕ್ಟೋಬರ್ 16 ರಂದು ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ “ಬೃಂದಾವಿಹಾರಿ” ಚಿತ್ರ ತೆರೆಗೆ ಬರುತ್ತಿದೆ .

ಈ ಬಾರಿ ನಾಡಹಬ್ಬ ದಸರಾ ಸಂದರ್ಭದಲ್ಲೂ ಗಣೇಶೋತ್ಸವ

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಜೋಡಿ ’ ಕೃಷ್ಣಂ ಪ್ರಣಯ ಸಖಿ” ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೊಮ್ಮೆ “ಬೃಂದಾವಿಹಾರಿ” ಚಿತ್ರದಲ್ಲಿ ಜೊತೆಯಾಗಿದ್ದಾರೆ. ಮುಳಬಾಗಿಲಿನ ಜನಪ್ರಿಯ ಶಾಸಕರು ಹಾಗೂ ನಿರ್ಮಾಪಕರಾಗಿರುವ ಸಮೃದ್ಧಿ ವಿ ಮಂಜುನಾಥ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರ ಅಕ್ಟೋಬರ್ 16, ನಾಡಹಬ್ಬ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ಗೋಲ್ಡನ್ ಮೆಗಾ ಸ್ಟಾರ್ ಅಭಿಮಾನಿಗಳಿಗೆ ದಸರಾದಲ್ಲೂ ಗಣೇಶೋತ್ಸವ. ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲು ಪ್ರಚಾರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿತ್ರತಂಡದ ಸದಸ್ಯರು ಇದರಲ್ಲಿ ಭಾಗಿಯಾಗಿದ್ದರು. ಈಗಾಗಲೇ ಬಿಡುಗಡೆಯಾಗಿ ಜನಪ್ರಿಯವಾಗಿರುವ ಚಿತ್ರದ ಮೂರು ಹಾಡುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈ ವೇಳೆ ಮಾತನಾಡಿದ ನಾಯಕ ಗಣೇಶ್, ಹಿರಿಯ ನಟಿ ಲಕ್ಷ್ಮಿ ಅವರ ಜೊತೆ ಕೆಲಸ ಮಾಡಿರುವುದು ನನಗೆ ಬಹಳ ಖುಷಿಯಾಗಿದೆ. ಚಿತ್ರೀಕರಣ ಸಮಯದಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ. ಹಿರಿಯ ಕಲಾವಿದರಾದ ಅಶೋಕ್, ರಾಮ್ ಕುಮಾರ್, ರಂಗಾಯಣ ರಘು ಮುಂತಾದವರ ಜೊತೆಗೆ ಅಭಿನಯಿಸಿರುವುದು ವಿಶೇಷ ಅನುಭವ ನೀಡಿದೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮಾಧವ. ಪ್ರೇಕ್ಷಕರು ನನ್ನಿಂದ ಏನು ಬಯಸುತ್ತಾರೆ ಅದು ಈ ಚಿತ್ರದಲ್ಲಿದೆ. ಮುಗ್ದತೆ, ಭಾವನೆಗೆ ಬೆಲೆ ಕೊಡುವ ಪಾತ್ರ. ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಯಿತು. ನಿರ್ದೇಶಕರು ಏನೋ ವಿಶೇಷ ಇದೆ ಅಂತ ಹೇಳುತ್ತಿದ್ದಾರೆ. ಅದು ಏನಿರಬಹುದು? ಅಂತ ಯೋಚಿಸುತ್ತಿದ್ದಾಗ, ಎರಡನೇ ಹಂತದ ಚಿತ್ರೀಕರಣ ಸಮಯದಲ್ಲಿ ಅವರು ಸ್ಕ್ರಿಪ್ಟ್ ನೀಡಿದರು. ಅದು ನೋಡಿದ ಮೇಲೆ ರೈಟರ್ಸ್ ಜೊತೆಗೆ ಕುಳಿತು ಚರ್ಚೆ ಮಾಡಿದೆ. ಎಮೋಷನ್, ಹಾಸ್ಯ ಮತ್ತು ಸಂಬಂಧಗಳನ್ನು ಹೇಗೆ ಒಟ್ಟಿಗೆ ಕಟ್ಟಿಕೊಡುವುದು ಎನ್ನುವುದು ಸವಾಲಿನಿಂದ ಕೂಡಿತ್ತು. ನಿರ್ದೇಶಕರು ಎಲ್ಲರಿಂದಲೂ ಒಳ್ಳೆಯ ಕೆಲಸ ತೆಗೆಸಿದ್ದಾರೆ. ಚಿತ್ರ ಅತ್ಯುತ್ತಮ ವಾಗಿ ಮೂಡಿಬಂದಿದೆ. ಇದು ನಿಮ್ಮ ಗಣೇಶನ ಅಪ್ಪಟ್ಟ ಕನ್ನಡ ಸಿನಿಮಾ. ದಸರಾ ವೇಳೆ ಎಲ್ಲರೂ ಕುಟುಂಬ ಸಮೇತವಾಗಿ ಬಂದು ನಮ್ಮ ಚಿತ್ರ ನೋಡಬಹುದು ಎಂದು ಹೇಳಿದರು.

ಅಕ್ಟೋಬರ್ 16ಕ್ಕೆ ನಮ್ಮ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಬೃಂದಾವಿಹಾರಿ ಚಿತ್ರದ ಜೊತೆ ದಸರಾ ಆಚರಣೆ ಮಾಡಲಾಗುತ್ತಿದೆ. ಹಲವು ನಿರ್ಮಾಪಕರು ನನಗೆ ಕರೆ ಮಾಡಿ ಜೈಲರ್-2 ಬರುತ್ತಿದೆ. ನೀವು ಏಕೆ ಇದೇ ಸಮಯದಲ್ಲಿ ಬರುತ್ತಿದ್ದೀರಾ? ಎಂದು ಕೇಳಿದರು. ಅದಕ್ಕೆ ಅವರಿಗೆ ಮರು ಪ್ರಶ್ನೆ ಮಾಡಿದೆ. ಇದು ನನ್ನ ಕನ್ನಡ ಸಿನಿಮಾ.‌ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಇದೆ. ಆ ನಂಬಿಕೆ ಮೇಲೆ ಜಗತ್ತಿನಾದ್ಯಂತ 1300 ಪರದೆಯಲ್ಲಿ ಚಿತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಕೆ.ವಿ.ಎನ್ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ‘ಖುಷಿ” ಚಿತ್ರದ ಹಾಡುಗಳನ್ನು ಕೇಳಿ ನನಗೆ ಖುಷಿಯಾಗಿತ್ತು . ನಮ್ಮ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಇದು ಅವರ ಮೊದಲ ಕನ್ನಡ ಚಿತ್ರ. ಇನ್ನೂ ಗಣೇಶ್ ಅವರು ನನಗೆ ಕ್ರಿಕೆಟ್ ಮೂಲಕ ಪರಿಚಯವಾದರು. ಈಗ ನಮ್ಮ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ನಿರ್ದೇಶಕ ಶ್ರೀನಿವಾಸರಾಜು ಒಂದೊಳ್ಳೆ ಚಿತ್ರ ಮಾಡಿ ಕೊಟ್ಟಿದ್ದಾರೆ. ಮೇಲುಕೋಟೆಯಲ್ಲಿ ಪೂಜೆ ಮಾಡಿ ಚಿತ್ರೀಕರಣ ಆರಂಭ ಮಾಡಿದ್ದೆವು. ಯಾವುದೇ ಅಡೆತಡೆಗಳಿಲ್ಲದೆ ಮೊದಲ ಹಂತದ ಚಿತ್ರೀಕರಣ 56 ದಿನಗಳ ಕಾಲ ಸತತವಾಗಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದೆ. ಒಂದು ಸಾವಿರಕ್ಕೂ ಅಧಿಕ ಜನರು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದರು ಎಂದು ನಿರ್ಮಾಪಕ ಸಮೃದ್ಧಿ ವಿ ಮಂಜುನಾಥ್ ತಿಳಿಸಿದರು.

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ ಈ ಸಿನಿಮಾ ಆದಮೇಲೆ ಮುಂದೆ ಗಣೇಶ್ ಅವರ ಜೊತೆಗೆ ಯಾವುದೇ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ. ಈ ಸಿನಿಮಾ ನನಗೆ ಅಷ್ಟು ತೃಪ್ತಿ ನೀಡಿದೆ. ಈ ಸಿನಿಮಾಗೆ ನಿಜವಾದ ನಾಯಕ ಎಂದರೆ ಗಣೇಶ್ ಮಾತ್ರ. ಅಷ್ಟು ಅದ್ಬುತವಾಗಿ ನಟಿಸಿದ್ದಾರೆ. ಇನ್ನೂ, ಈ ಚಿತ್ರಕ್ಕೆ ಕೇಳಿದೆಲ್ಲಾ ಕೊಟ್ಟು ಯಾವುದೇ ಕೊರತೆ ಬಾರದ ಹಾಗೆ ಮಾಡಿರುವ ನಿರ್ಮಾಪಕರಿಗೆ, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ತಂತ್ರಜ್ಞರು ಹಾಗೂ ಕಲಾವಿದರಿಗೆ ಧನ್ಯವಾದ ಹೇಳುತ್ತೇನೆ. ಸರಿಯಾಗಿ ನಮ್ಮ ಚಿತ್ರ ಆರಂಭವಾಗಿ ಒಂದು ವರ್ಷಗಳಾಗಿದೆ. ಇದು ನಮ್ಮ ಚಿತ್ರದ ಮೊದಲ ಪತ್ರಿಕಾಗೋಷ್ಠಿ. ಮುಂದಿನ ದಿನಗಳಲ್ಲಿ ಹಾಡುಗಳು ಹಾಗೂ ಟ್ರೇಲರ್ ಬಿಡುಗಡೆಯಾಗಲಿದೆ ಎಂದರು.

ಹಿರಿಯ ಕಲಾವಿದರಾದ ರಂಗಾಯಣ ರಘು ಅವರು ಮಾತನಾಡಿ ಹಾಡಿನಲ್ಲಿ ಗಣಪ ಮುದ್ದಾಗಿ ಕಾಣುತ್ತಾರೆ. ಚಿತ್ರದಲ್ಲಿ ನೂರಾರು ಕಲಾವಿದರು ಅಭಿನಯಿಸಿದ್ದಾರೆ. 80-90ರ ದಶಕದಲ್ಲಿ ನಾವು ಇಷ್ಟು ಜನ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡುತ್ತಿದ್ದೆವು. ಇದು ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ ಎಂದರು

ನಟಿ ಮಾಳವಿಕ ಶರ್ಮಾ ಮಾತನಾಡಿ, ಕನ್ನಡದಲ್ಲಿ ಮೊದಲ ಸಿನಿಮಾ, ತೆಲುಗು,ತಮಿಳು ಈಗಷ್ಟೇ ಮಲೆಯಾಳಂನಲ್ಲಿ ನಟಿಸಿದ್ದೇನೆ, ಈವರೆಗೆ ಮಾಡದ ಪಾತ್ರ ನೀಡಿದ್ದಾರೆ, ಅಭಿನಯಕ್ಕೆ ಮಹತ್ವವಿರುವ ಪಾತ್ರ. ಚಿತ್ರದಲ್ಲಿ ಮೀರಾ ಪಾತ್ರ ಮಾಡಿದ್ದೇನೆ, ಕೃಷ್ಣನ ಪರಮಭಕ್ತೆ. ಒಳ್ಳೆಯ ಪಾತ್ರ ಸಿಕ್ಕಿದೆ . ಪ್ರತಿಯೊಬ್ಬರು ನನ್ನನು ಅವರ ಕುಟುಂಬದ ರೀತಿ ನೋಡಿಕೊಂಡರು ಎಂದು ಮಾಹಿತಿ ಹಂಚಿಕೊಂಡರು

ಮತ್ತೊಬ್ಬ ನಟಿ ದೇವಿಕಾ ಭಟ್ ಮಾತನಾಡಿ, ಇದು ನನ್ನ ಮೊದಲ ಚಿತ್ರ. ಇಡೀ ಚಿತ್ರತಂಡ ನನಗೆ ಬೆಂಬಲ ನೀಡಿತು. ಹೀಗಾಗಿ ಚಿತ್ರದಲ್ಲಿ ನಾನು ಸರಾಗವಾಗಿ ಅಭಿನಯಿಸಲು ಸಾಧ್ಯವಾಯಿತು ಎಂದರು.

ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗೀತರಚನೆಕಾರ ಡಾ|| ವಿ.ನಾಗೇಂದ್ರ ಪ್ರಸಾದ್, ಕಲಾ ನಿರ್ದೇಶಕ ರವಿ ಸಂತೆಹಕ್ಲು, ನೃತ್ಯ ನಿರ್ದೇಶಕ ಭಾನು, ಸಂಭಾಷಣೆ ಬರೆದರುವ ವಿಜಯ್ ಈಶ್ವರ್, ಕೋ ರೈಟರ್ ಕ್ರಾಂತಿ ಕುಮಾರ್ ಹಾಗೂ ಕಲಾವಿದರಾದ ಕುರಿ ಪ್ರತಾಪ್, ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಚಿತ್ರದ ಕುರಿತು ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted