“ಬಾಸ್” ಚಿತ್ರದಲ್ಲಿ ರೋಚಕ ತಿರುವುಗಳು ..

ಯಾರೂ ಊಹಿಸಿರದ ಕ್ಲೈಮ್ಯಾಕ್ಸ್* ..

ಕಷ್ಟಪಟ್ಟು ಬೆಳೆದ ಜೀವ. ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಜೀವ ಕೂಡ. ಆತ ತನ್ನವರನ್ನು ಪ್ರೀತಿಯಿಂದ ನೋಡಿಕೊಂಡ ಪರಿಯೇ ಆತನನ್ನು “ಬಾಸ್” ಎಂದು ಕರೆಯುವ ಹಾಗೆ ಮಾಡಿರುತ್ತದೆ. ಆದರೆ ಈ ಜನಾನುರಾಗಿ “ಬಾಸ್” ಗೂ ಕೂಡ ಕಷ್ಟ ತಪ್ಪಿದ್ದಲ್ಲ. ಅಷ್ಟಕ್ಕೂ “ಬಾಸ್” ಮಾಡಿದ್ದು ತಪ್ಪಾ? ಅಲ್ಲವಾ?..ಹೌದು, ಇತ್ತೀಚೆಗೆ ತೆರೆಕಂಡಿರುವ ವಿ.ಲವ ನಿರ್ದೇಶನದ ಹಾಗು ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ಹಾಗೂ ಆರಂಭದಿಂದಲೂ ‌ಸಾಕಷ್ಟು ಸದ್ದು ಮಾಡುತ್ತಿರುವ “ಬಾಸ್” ಚಿತ್ರದ ಪ್ರಮುಖ ಕಥಾವಸ್ತು ಇದು. ಸ್ನೇಹಿತೆ, ಅಭಿಮಾನ ಹಾಗೂ ಕೊಲೆ ಈ ಮೂರನ್ನು ಕೇಂದ್ರವಾಗಿಟ್ಟುಕೊಂಡು ನಿರ್ದೇಶಕ ವಿ.ಲವ ಈ ಚಿತ್ರದ ಕಥೆ ಹೆಣೆದಿದ್ದಾರೆ.

ಈ “ಬಾಸ್” ಬಿಸಿಬಿ ಪರ ಆಡುವ ಸ್ಟಾರ್ ಆಟಗಾರ. ತನ್ನ ಅಮೋಘ ಆಟದಿಂದಲೇ ಅಭಿಮಾನಿಗಳನ್ನು ಮೋಡಿ ಮಾಡಿದ ಮೋಡಿಗಾರ.. ಇಂತಹ “ಬಾಸ್” ಗೆ ಒಬ್ಬ ಸ್ನೇಹಿತೆ. ಆ ಸ್ನೇಹಿತೆಗೆ ಅನಾಮಧೇಯ ವ್ಯಕ್ತಿಯಿಂದ ಕಾಟ.. ಆ ವ್ಯಕ್ತಿಗೆ ಸ್ನೇಹಿತೆ ಹಾಗೂ ಸಂಗಡಿಗರಿಂದ ದಂಡಂ ದಶಗುಣಂ. ಆತನಿಗೆ ಬುದ್ದಿ ಹೇಳಲು ಸ್ನೇಹಿತೆಯಿಂದ “ಬಾಸ್” ಗೆ ಮನವಿ. ಅನಾಮಧೇಯ ‌ವ್ಯಕ್ತಿಗೆ ಬುದ್ದಿ ಹೇಳಿದ “ಬಾಸ್”, ಆತನನ್ನು ಆಸ್ಪತ್ರೆಗೆ ಸೇರಿಸಲು ಹೇಳಿ ಆ ಜಾಗದಿಂದ ಹೊರಡುತ್ತಾರೆ. ಆನಂತರ ಅಲ್ಲಿ ನಡೆಯುವುದೆ ಬೇರೆ.‌ ಹೊಡೆತ ತಾಳಲಾರದ ಅನಾಮಧೇಯ ಅಸು‌ನೀಗುತ್ತಾನೆ… ವ್ಯಕ್ತಿಯ ಸಾವಿನ ಸುದ್ದಿ ತಿಳಿದು “ಬಾಸ್” ಗೆ ಹಾಗೂ ಆತನ ಸ್ನೇಹಿತೆಗೆ ಗಾಬರಿಯಾಗುತ್ತದೆ. ಜೊತೆಗೆ ಆತನ ತಪ್ಪಿಗೆ ಸಾವು ಶಿಕ್ಷೆ ಆಗಬಾರದಿತ್ತೆಂದು “ಬಾಸ್” ನ ಮನ ಮಿಡಿಯುತ್ತದೆ. ಆದರೆ, ಆ ಸಾವೇ “ಬಾಸ್” ಗೆ ತಲೆನೋವಾಗುತ್ತದೆ. ಮುಂದೇನಾಗುತ್ತದೆ? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಒಂದು ಕೊಲೆಯ ಸುತ್ತ ನಿರ್ದೇಶಕರು ಹೆಣೆದಿರುವ ರೋಚಕ ಸನ್ನಿವೇಶಗಳು ಕುತೂಹಲ ಹುಟ್ಟಿಸುತ್ತದೆ. “ಬಾಸ್” ಪಾತ್ರದಲ್ಲಿ ತನುಷ್ ಶಿವಣ್ಣ ಅವರ ಅಭಿನಯ ಎಲ್ಲರ ಮನದಲ್ಲೂ ಉಳಿಯುತ್ತದೆ. ಪಾಯಲ್ ಚಂಗಪ್ಪ, ವಂದಿತಾ ಗೌಡ, ಸಂದೀಪ್ ನೀನಾಸಂ ಮುಂತಾದವರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶರತ್ ಅವರ ಛಾಯಾಗ್ರಹಣವೂ ಚಿತ್ರಕ್ಕೆ ಪೂರಕವಾಗಿದೆ. “ಬಾಸ್” ನಲ್ಲಿ ಯಾರು ಊಹಿಸಿರದ ಕ್ಲೈಮ್ಯಾಕ್ಸ್ ಸಹ ಇದೆ. ಅದೇನು ಎಂದು ತಿಳಿಯಬೇಕಾದರೆ “ಬಾಸ್” ಚಿತ್ರವನ್ನು ಒಮ್ಮೆ ನೋಡಿ ಬಿಡಿ

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted