ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ನಿರ್ದೇಶನದ ನೂತನ ಚಿತ್ರಕ್ಕೆ ಶುಭಾರಂಭ .
*ಮತ್ತೊಂದು ಸದಭಿರುಚಿಯ ಚಿತ್ರದ ನಿರೀಕ್ಷೆ. ವಿ. ಹರಿಕೃಷ್ಣ ಸಂಗೀತದ ಮೆರುಗು, ಗಿರಿಧರ್ ದಿವಾನ್ ಛಾಯಾಗ್ರಹಣದ ಸೊಬಗು
ಸದಭಿರುಚಿಯ ಹಾಗೂ ಮನಮುಟ್ಟುವ ಚಿತ್ರಗಳ ನಿರ್ದೇಶಕರೆಂದೇ ಖ್ಯಾತರಾಗಿರುವ ಕಲಾಸಾಮ್ರಾಟ್ ಡಾ||ಎಸ್. ನಾರಾಯಣ್ ಅವರ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
ಈ ಹಿಂದೆ ತಮ್ಮ ನೂತನ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಬರವಣಿಗೆಯಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದ ಡಾ||ಎಸ್. ನಾರಾಯಣ್, ಇದೀಗ ಚಿತ್ರದ ಮುಹೂರ್ತ ನೆರವೇರಿಸುವ ಮೂಲಕ ಹೊಸ ಚಿತ್ರಕ್ಕೆ ಶುಭಾರಂಭ ನೀಡಿದ್ದಾರೆ. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಶ್ರೀಮತಿ ಲತಾ ಜಯಪ್ರಕಾಶ್ ಅವರು ಆರಂಭ ಫಲಕ ತೋರಿದರೆ, ಶ್ರೀಮತಿ ಭಾಗ್ಯವತಿ ಎಸ್. ನಾರಾಯಣ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕ್ರಿಯೇಟಿವ್ ಪ್ರೊಡ್ಯೂಸರ್ ಅಜಯ್ ಹಾಗೂ ಪ್ರೊಡಕ್ಷನ್ ಹೆಡ್ ಪುಷ್ಪಮಾಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ನೂತನ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸುತ್ತಿದ್ದು, ಎಸ್. ನಾರಾಯಣ್ ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದೆ. ಗಿರಿಧರ್ ದಿವಾನ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ ಸಂಕಲನ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಇರಲಿದೆ.
ಕನ್ನಡ ಚಿತ್ರರಂಗದ ಮೇರು ನಟರಾದ ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವು ಪ್ರಮುಖ ನಾಯಕ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಗ್ಗಳಿಕೆ ಎಸ್. ನಾರಾಯಣ್ ಅವರದ್ದು. ನಿರ್ದೇಶಕರಾಗಿ ಮಾತ್ರವಲ್ಲದೆ, ನಿರ್ಮಾಪಕರಾಗಿ ಹಾಗೂ ಕಲಾವಿದರಾಗಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಅವರು, ವಿಭಿನ್ನ ಕಥಾಹಂದರ ಮತ್ತು ಸದಭಿರುಚಿಯ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಇದೀಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ನೂತನ ಚಿತ್ರ ಆರಂಭದಲ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಶೀರ್ಷಿಕೆ, ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹಾಗೂ ತಾರಾಬಳಗದ ಕುರಿತಾದ ಮಾಹಿತಿಯನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿರುವ ಡಾ. ಎಸ್. ನಾರಾಯಣ್ ಅವರು, ಶೀಘ್ರದಲ್ಲೇ ಈ ಎಲ್ಲ ವಿವರಗಳನ್ನು ಸ್ವತಃ ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
