ಗಣೇಶನ ಹಬ್ಬಕ್ಕೆ ಬರಲಿದೆ ಕೋಮಲ್ ಕುಮಾರ್ ಅಭಿನಯದ “ರೋಲೆಕ್ಸ್” ಸಿನಿಮಾದ ಲಿರಿಕಲ್ ವಿಡಿಯೋ ಸಾಂಗ್. .
ಮಧು ಫಿಲಂ ಸುರ್ಕ್ಯುಯಿಟ್ಸ್ ಸಂಸ್ಥೆ ಲಾಂಛನದಡಿಯಲ್ಲಿ ಅಂಬಟಿ ಮಧು ಮೋಹನ್ ನಿರ್ಮಿಸಿರುವ, ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ, ಸೋನಾಲ್ ಮೊಂತೆರೊ ನಾಯಕಿಯಾಗಿ ಹಾಗೂ ವಿನೋದ್ ಪ್ರಭಾಕರ್ ವಿಶೇಷಪಾತ್ರದಲ್ಲಿ ಅಭಿನಯಿಸಿರುವ “ರೋಲೆಕ್ಸ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ, ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಂದಿದೆ. ಸೆಪ್ಟೆಂಬರ್ 14 ರಂದು ಗಣೇಶನ ಹಬ್ಬ. ಈ ಶುಭದಿನದಂದು “ರೋಲೆಕ್ಸ್” ಚಿತ್ರದ ಸುಮಧುರ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಕವಿರತ್ನ ಡಾ|ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟೀಸರ್ ಗೆ ನಿರೀಕ್ಷೆಗೂ ಮೀರಿ ಪ್ರಶಂಸೆ ವ್ಯಕ್ತವಾಗಿದೆ. ಈ ವಿಷಯ ಚಿತ್ರತಂಡಕ್ಕೆ ಖುಷಿಕೊಟ್ಟಿದೆ. ಕೆಲವೇ ದಿನಗಳಲ್ಲಿ ಆದಿಪೂಜಿತ ಗಣೇಶನ ಹಬ್ಬವಿದೆ. ಅಂದು ನಮ್ಮ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ. ಕೋಮಲ್ ಕುಮಾರ್ ಅಭಿನಯದ ಈ ಹಾಡು ಅದ್ದೂರಿಯಾಗಿ ಮೂಡಿಬಂದಿದೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡು ಅಭಿಮಾನಿಗಳ ಮನ ಗೆಲ್ಲಲ್ಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ. ನಿರ್ಮಾಪಕ ಅಂಬಟಿ ಮಧು ಮೋಹನ್ ಅವರು ಯಾವುದೇ ಕೊರತೆ ಬಾರದ ಹಾಗೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಶ್ರೀನಿವಾಸ್ ಮಂಡ್ಯ ತಿಳಿಸಿದ್ದಾರೆ.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಅವರ ಸಂಕಲನವಿರುವ ಈ ಚಿತ್ರಕ್ಕೆ ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಹಾಗೂ ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
