ಮಹಾನ್ ಚಿತ್ರದಲ್ಲಿ ಮಹಾನ್ ನಟರು
ಆಕಾಶಾ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದೂರು ನಿರ್ಮಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಹಾಗೂ ಶಿವರಾಜ್ ಕುಮಾರ್ ಮತ್ತು ವಿಜಯ್ ರಾಘವೇಂದ್ರ ನಟಿಸಿರುವ “ಮಹಾನ್” ಚಿತ್ರದಲ್ಲಿ ಹಲವು ವಿಶೇಷಗಳಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ “ಮಹಾನ್” ನಟರಾದ ದೇವರಾಜ್, ರಮೇಶ್ ಭಟ್, ಅವಿನಾಶ್, ರಂಗಾಯಣ ರಘು, ಶರತ್ ಲೋಹಿತಾಶ್ವ ಹಾಗೂ ರಮೇಶ್ ಇಂದಿರಾ ನಟಿಸಿದ್ದಾರೆ. ಈ ಆರು ಜನ ಕಲಾವಿದರು ಪ್ರಮುಖಪಾತ್ರಗಳಲ್ಲಿ ನಟಿಸಿದ್ದು, ಇತ್ತೀಚೆಗೆ ಈ ಆರು ಕಲಾವಿದರ ಫಸ್ಟ್ ಲುಕ್ ಅನಾವರಣವಾಗಿದೆ.
ಪಾತ್ರದ ಪ್ರಾಬಲ್ಯ ಹೆಚ್ಚಾದಷ್ಟು ನಟರ ಜವಾಬ್ದಾರಿ ಹೆಚ್ಚಾಗುತ್ತದೆ. ನಿರ್ದೇಶಕರ ನಿರೀಕ್ಷೆಗೆ ಜೀವ ತುಂಬುವ ಕೆಲಸವನ್ನ ಇಲ್ಲಿ ಕನ್ನಡ ಮೇರು ನಟರು ನಿರ್ವಹಿಸಿದ್ದಾರೆ.
ರಮೇಶ್ ಇಂದಿರಾ
ಇತ್ತೀಚಿನ ದಿನಗಳಲ್ಲಿ ವಿಶಿಷ್ಟ ನಟನೆಯ ಮೂಲಕ ತಮ್ಮ ಛಾಪನ್ನ ಮೂಡಿಸಿರೋ ರಮೇಶ್ ಇಂದಿರಾ ಅವರು ಇನ್ ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.
ಡೈನಮಿಕ್ ಹೀರೋ ದೇವರಾಜ್
ಇನ್ ಸ್ಪೆಕ್ಟರ್ ಕಾರ್ಯನಿರ್ವಹಣೆಯ ವಿಧಾನ ಹಾಗೂ ಲೋಪವನ್ನು ಪ್ರಶ್ನಿಸೋ ಮೇಲಧಿಕಾರಿಯ ಪಾತ್ರದಲ್ಲಿ ನಟಿಸೋದಕ್ಕೆ ಒಬ್ಬ ಗಟ್ಟಿಗ, ಸಮರ್ಥ ನಟನ ಅವಶ್ಯಕತೆಗೆ ನಿರ್ದೇಶಕರ ಆಯ್ಕೆ ಇದ್ದದ್ದು, ಕನ್ನಡ ಚಿತ್ರರಂಗದಲ್ಲೇ ಪೊಲೀಸ್ ಪಾತ್ರಕ್ಕೆ ಹೆಸರುವಾಸಿಯಾದ ಹಿರಿಯ ನಟ ಡೈನಮಿಕ್ ಹೀರೋ ದೇವರಾಜ್. ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪಾತ್ರ ನಿರ್ವಹಣೆಗೆ ಅವರೇ ಸರಿಸಾಟಿ, ಅವರ ಫಸ್ಟ್ ಲುಕ್ ನಲ್ಲೇ ಅವರಿಗೆ ಪಾತ್ರದ ಮೇಲಿರುವ ಹಿಡಿತ ಕಾಣಿಸುತ್ತದೆ.
ರಂಗಾಯಣ ರಘು
ಇಡೀ ಹಳ್ಳಿಯ ಹಿತಾಸಕ್ತಿಯನ್ನು ಕಾಯುವ ಹಿರಿಯ ರೈತ ಮುಖಂಡನ ಪಾತ್ರದಲ್ಲಿ ರಂಗಾಯಣ ರಘು ಅವರು ಕಾಣಿಸಿಕೊಂಡಿದ್ದಾರೆ. ಅವರ ನಟನ ಕೌಶಲ್ಯದ ಪರಿಚಯ ಕನ್ನಡ ಚಿತ್ರರಂಗಕ್ಕೆ ಹೊಸತೇನಲ್ಲ. ಯಾವುದೇ ಕಾಲಘಟ್ಟದ ಪಾತ್ರವಾದರೂ, ಯಾವುದೇ ರೀತಿಯ ಪಾತ್ರವಾದರೂ ಅವರು ಸಲೀಸಾಗಿ ನಿರ್ವಹಿಸಬಲ್ಲರು.
ರಮೇಶ್ ಭಟ್
ಅತ್ಯಾನುಭವಿ ನಟರಾದ ರಮೇಶ್ ಭಟ್ ರವರು ನಮ್ಮ ಮಹಾನ್ ಚಿತ್ರದಲ್ಲಿ ಅನುಭವಿ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶರತ್ ಲೋಹಿತಾಶ್ವ
ಊರಿನ ಆಚರಣೆಗಳು, ದೈವಿಕ ಮೌಲ್ಯಗಳು, ಆಧ್ಯಾತ್ಮ ಚಿಂತನೆಗಳ ಮೂಲಕ ಜನರ ಮೇಲೆ ಪ್ರಭಾವ ಬೀರುವ ಧಾರ್ಮಿಕ ಗುರುವಿನ ಪಾತ್ರದಲ್ಲಿ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ನಟಿಸಿದ್ದು, ಅವರ ಹಿಂದಿನ ಎಲ್ಲಾ ಪಾತ್ರಗಳಿಗಿಂತ ತುಂಬ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ.
ಅವಿನಾಶ್
ಇಡೀ ಹಳ್ಳಿಗೆ ಸೇನೆಯ ಮಹತ್ವವನ್ನು ಪರಿಚಯಿಸಿ, ಒಬ್ಬ ಹೆಮ್ಮೆಯ ಶಿಸ್ತಿನ ಸಿಪಾಯಿಯಾಗಿ ಅವಿನಾಶ್ ರವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಎಲ್ಲಾ ನಟರ ಸಹಭಾಗಿತ್ವ ಮಹಾನ್ ಚಿತ್ರಕ್ಕೆ ಶಕ್ತಿ ತುಂಬಿದೆ ಎಂದು ನಿರ್ದೇಶಕರಾದ ಪಿ ಸಿ ಶೇಖರ್ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದೊಂದು ಬಹು ತಾರಾಬಳಗದ ಚಿತ್ರವಾಗಿದ್ದು, ವಿಜಯ ರಾಘವೇಂದ್ರ ಅವರು ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸಿದ್ದಾರೆ. ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಸಹ ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಜನಪ್ರಿಯ ತಾಂತ್ರಿಕ ವರ್ಗವಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಡಾ। ವಿ. ನಾಗೇಂದ್ರ ಪ್ರಸಾದ್ ಗೀತೆ ರಚನೆ, ಎಸ್. ವೈದಿ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಚಿತ್ರದಲ್ಲಿದೆ.

