ಸೆಪ್ಟೆಂಬರ್ 18 ರಂದು ತೆರೆಗೆ ಬರಲಿದೆ ಶ್ರೀನಗರ ಕಿಟ್ಟಿ – ಮೇಘನಾರಾಜ್ ಅಭಿನಯದ “ಅಮರ್ಥ

ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ|| ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನದ ಮತ್ತು ಶ್ರೀನಗರ ಕಿಟ್ಟಿ – ಮೇಘನಾರಾಜ್ ನಾಯಕ- ನಾಯಕಿಯಾಗಿ ನಟಿಸಿರುವ “ಅಮರ್ಥ” ಚಿತ್ರ ಇದೇ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್ ಅವರು ಚಿತ್ರದ ಬಿಡುಗಡೆ ದಿನಾಂಕವುಳ್ಳ ಮೋಷನ್ ಪೋಸ್ಟರ್ ಅನ್ನು ಅನಾವರಣ ಮಾಡಿದರು. ತಮ್ಮಣ್ಣ ಶೆಟ್ಟಿ ಅವರು ಸಹ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಡಿನ ಪ್ರದರ್ಶನ ‌ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಹಿರಿತೆರೆ ಹಾಗೂ ಕಿರುತೆರೆಯ ಕಲಾವಿದನಾಗಿ ಎರಡು ದಶಕಗಳಾಗಿದೆ. ಈಗ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ.‌ ವಿನಯ್ ಪ್ರೀತಮ್ ಹಾಗೂ ನಾನು ಇಬ್ಬರು ಜಂಟಿಯಾಗಿ ಈ ಚಿತ್ರ ನಿರ್ದೇಶನ ಮಾಡಿದ್ದೇವೆ. ನಾನು ಈ ಚಿತ್ರದ ನಿರ್ಮಾಪಕನಾದರೂ, ನನಗೆ ಬೆಂಬಲಕ್ಕೆ ನಿಂತವರು ಹಾಗೂ ಪ್ರಧಾನ ನಿರ್ಮಾಪಕರು ಡಾ||ಕನ್ಯಾನ ಸದಾಶಿವ ಶೆಟ್ಟಿ. ಈ ಚಿತ್ರ ಆರಂಭವಾಗಿ ಎರಡು ವರ್ಷಗಳಾಗಿದೆ. ಈಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಸೆನ್ಸಾರ್ ಮಂಡಳಿ ಹದಿಮೂರು ವರ್ಷಗಳ ಮಕ್ಕಳಿಂದ ಎಲ್ಲರೂ ನೋಡಬಹುದಾದ ಚಿತ್ರವೆಂದು ಹೇಳಿ ಯು/ಎ ಪ್ರಮಾಣಪತ್ರ ನೀಡಿದೆ. ಸೆಪ್ಟೆಂಬರ್ 18 ರಂದು ಚಿತ್ರ ಬಿಡುಗಡೆಯಾಗಲಿದೆ. “ಅಮರ್ಥ” ಎಂದರೆ ನಮ್ಮೆಲ್ಲರನ್ನು ಮೀರಿದ ಒಂದು ಶಕ್ತಿ ಎನ್ನಬಹುದು. ನಾವು ಸಾಮಾನ್ಯವಾಗಿ ಯಾವುದೇ ನಮ್ಮ ಜೀವನದಲ್ಲಿ ಏನೇ ನಡೆದರೂ, ದೇವರ ದಯೆ, ಹಣೆಬರಹ, ಗ್ರಹಾಚಾರ ಅಂತೆಲಾ ಅಂದುಕೊಳ್ಳುತ್ತೇವೆ. ಅದು ನಿಜ. ಆದರೆ, ಅದಕ್ಕೂ ಮೀರಿದ ಶಕ್ತಿಯೊಂದಿದೆ. ಅದೇ “ಅಮರ್ಥ” ಎಂದು ಶೀರ್ಷಿಕೆಯ ಬಗ್ಗೆ ಮಾಹಿತಿ ನೀಡಿದ ನಿರ್ಮಾಪಕ, ನಿರ್ದೇಶಕ ಹಾಗೂ ನಟ ಗುರು ಹೆಗ್ಡೆ, ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು.

“ಮಡಮಕ್ಕಿ”, ” ನಾನು, ಅದು ಮತ್ತು ಸರೋಜ” ಚಿತ್ರಗಳ ನಂತರ ಈ ಚಿತ್ರವನ್ನು ಗುರು ಹೆಗ್ಡೆ ಅವರ ಜೊತೆಯಾಗಿ ನಿರ್ದೇಶಿಸಿದ್ದೇನೆ. ಗುರು ಹೆಗ್ಡೆ ಅವರು ಹೇಳಿದ ಹಾಗೆ ಇದೊಂದು ವಿಭಿನ್ನ ಕಥೆ‌. ಶ್ರೀನಗರ ಕಿಟ್ಟಿ, ಮೇಘನಾರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ‌‌. ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗ್ಡೆ, ತಮ್ಮಣ್ಣ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಗುರುಪ್ರಶಾಂತ್ ರೈ ಛಾಯಾಗ್ರಹಣ, ಶಿನಾಯ್ ವಿ ಜೋಸೆಫ್, ಪಂಚಮ್ ಜೀವ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್, ಬಲರಾಮ್ ಹಾಗೂ ರಾಕೇಶ್ ಆಚಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜನ ಪ್ರಿಯವಾಗುವಂತಹ ಒಂದೊಳ್ಳೆ ಚಿತ್ರ ಇದೇ ಸೆಪ್ಟೆಂಬರ್ 18 ರಂದು ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ವಿನಯ್ ಪ್ರೀತಮ್.

ಇದು “ಅಮರ್ಥ” ಚಿತ್ರದ ಮೊದಲ ಪತ್ರಿಕಾಗೋಷ್ಠಿ. ನಾನು ಹಾಗೂ ಮೇಘನಾರಾಜ್ ಒಟ್ಟಾಗಿ ನಟಿಸಿರುವ ಮೂರನೇ ಚಿತ್ರವಿದು. ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ನಿರ್ದೇಶನ ಮಾಡಿದ್ದಾರೆ. ಒಂದು ಮುದ್ದಾದ ಕಥೆ. ಎಲ್ಲರಿಗೂ ಪ್ರಿಯವಾಗುವ ಕಥೆಯೂ ಹೌದು. ಬಾಲ್ಯದಿಂದ ಒಬ್ಬ ಹುಡುಗನ ಜರ್ನಿ ಹೇಗಿರುತ್ತದೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಗುರು ಹೆಗ್ಡೆ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಕೂಡ ಬಹಳ ಸೊಗಸಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ 48 ದಿನಗಳ ಕಾಲ ಚಿತ್ರೀಕರಣ ನಡೆದಿದೆ ಎಂದು ಶ್ರೀನಗರ ಕಿಟ್ಟಿ ಹೇಳಿದರು.

ನಾನು ಹಾಗೂ ಕಿಟ್ಟಿ ಅವರು “ಬಹು ಪರಾಕ್”, ” ಬುದ್ದಿವಂತ ೨” ಚಿತ್ರಗಳ ನಂತರ ಈ ಚಿತ್ರದಲ್ಲಿ ನಟಿಸಿದ್ದೇವೆ. ನಾನು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಕುರಿತಾದ ಕೆಲವು ವಿಷಯಗಳನ್ನು ಹಂಚಿಕೊಂಡಾಗ ಎಲ್ಲರೂ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಕೊನೆಗೂ ಆ ಸಮಯ ಬಂದಿದೆ. ಸೆಪ್ಟೆಂಬರ್ 18 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ಗುರು ಹೆಗ್ಡೆ ಅವರು ಈಗಿನ ಪರಿಸ್ಥಿತಿಯಲ್ಲಿ ಅಂದುಕೊಂಡ ಹಾಗೆ ಯಾವುದೇ ಕೊರತೆ ಬಾರದ ಚಿತ್ರ ನಿರ್ಮಾಣ ಮಾಡಿದ್ದಾರೆ. ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ಕಥೆ ಹೇಳಿದ ಪರಿಯೂ ಬಹಳ ಚೆನ್ನಾಗಿತ್ತು. ಸ್ನೇಹಿತರ ಶಾಲಾ ಜೀವನದಿಂದ ಆರಂಭವಾಗುವ ಕಥೆ‌. ಅಲ್ಲಿಂದ ಎಲ್ಲರ ಜೀವನ ಬೇರೆ ಬೇರೆ ಕಡೆ ಹೋಗಿರುತ್ತದೆ. ಕೊನೆಗೆ ಎಲ್ಲರೂ ಒಂದು ಕಡೆ ಸೇರಿಕೊಂಡಾಗ ಏನಾಗುತ್ತದೆ ಎಂದು ಹೇಳುವ ಕಥೆಯೂ ಹೌದು. ನನ್ನ ಪಾತ್ರದ ಹೆಸರು ಲಕ್ಷ್ಮೀ. ಜೀವನದಲ್ಲಿ ಏರುಪೇರುಗಳನ್ನು ಕಂಡಿರುವ ಹುಡುಗಿ. ಆ ಹುಡುಗಿಗೆ ಕಿಟ್ಟಿ ಅವರ ಪಾತ್ರ ಹೇಗೆ ಜೊತೆಯಾಗಿ ನಿಲ್ಲುತ್ತದೆ ಎಂಬುದೇ ಈ ಚಿತ್ರದ ಕಥಾ ವಸ್ತು ಎಂದರು ನಟಿ ಮೇಘನಾರಾಜ್.

ಚಿತ್ರದಲ್ಲಿ ನಟಿಸಿರುವ ಕೃತಿ ಶೆಟ್ಟಿ, ಅಶ್ವ ಹಾಗೂ ಸಂಗೀತ ನಿರ್ದೇಶಕ ಪಂಚಮ್ ಜೀವ ಮುಂತಾದವರು “ಅಮರ್ಥ” ಚಿತ್ರದ ಕುರಿತು ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted