ರಷ್ಯಾದ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ ‘ರೂಬಿ ಕ್ಯೂಬ್ ’ರಷ್ಯಾ–ಭಾರತ ಸಾಂಸ್ಕೃತಿಕ ಸಹಕಾರದ ಕುರಿತು ಪಿ. ಶೇಷಾದ್ರಿ ವಿಶೇಷ ಸಂವಾದದಲ್ಲಿ ಭಾಗಿರಷ್ಯಾದ ಟಾಟರ್ಸ್ತಾನ್ ಗಣರಾಜ್ಯದ ಕಜಾನ್ ನಗರದಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ. ಶೇಷಾದ್ರಿ ಅವರ ‘ರೂಬಿ ಕ್ಯೂಬ್’ ಚಿತ್ರವು ಪ್ರದರ್ಶನಗೊಳ್ಳಲಿದೆ. ರಷ್ಯಾ–ಭಾರತ ಸಂಬಂಧಗಳ ಹಿನ್ನೆಲೆಯಲ್ಲಿ ಆಯೋಜಿಸಲಾಗುತ್ತಿರುವ ಈ ಚಿತ್ರೋತ್ಸವವು ಭಾರತೀಯ ಸಿನಿಮಾವನ್ನು ರಷ್ಯಾದ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಮುಖ ಸಾಂಸ್ಕೃತಿಕ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.

ರೂಬಿಕ್ಯೂಬ್’ ಚಲನಚಿತ್ರ ಒಂದು ಆಳವಾದ ಭಾವನಾತ್ಮಕ ಕೌಟುಂಬಿಕ ಕಥೆ. ಸಂಬಂಧಗಳ ಸಂಕೀರ್ಣತೆ, ಮುರಿದುಹೋಗಿರುವ ಬಾಂಧವ್ಯಗಳು ಮತ್ತು ಒಪ್ಪಿಕೊಳ್ಳುವಿಕೆಯತ್ತ ಸಾಗುವ ನಿಧಾನ ಪ್ರಯಾಣ ಈ ಚಿತ್ರದ ಕೇಂದ್ರಬಿಂದು. ರೂಬಿಕ್ಸ್ ಕ್ಯೂಬ್’ ಎಂಬ ಆಟಿಕೆ ಈ ಕಥೆಯ ರೂಪಕ. ಜೀವನದಂತೆಯೇ ಇದನ್ನು ಸರಿಹೊಂದಿಸಲು ಅಸಾಧ್ಯವೆನಿಸುತ್ತದೆ. ಆದರೆ ತಾಳ್ಮೆ, ಸಹಾನುಭೂತಿ, ನಿರಂತರ ಪ್ರಯತ್ನದಿಂದ ಇದರ ಮುಖಗಳನ್ನು ಜೋಡಿಸಬಹುದು. ಪ್ರಥಮ ಎಸ್. ಅವರ ಕತೆ ಆಧರಿಸಿದ ಈ ಚಿತ್ರದಲ್ಲಿ ದತ್ತಣ್ಣ, ವಿದ್ಯಾಮೂರ್ತಿ, ರಾಧ್ಯಾ, ದೇವ್ ದೇವಯ್ಯ ನಟಿಸಿದ್ದಾರೆ.

ಟಾಟರ್ಸ್ತಾನ್ ಗಣರಾಜ್ಯದ ಸರ್ಕಾರದ ಆಹ್ವಾನದ ಮೇರೆಗೆ ನಡೆಯಲಿರುವ ಈ ಭಾರತೀಯ ಚಿತ್ರೋತ್ಸವದ ಆರಂಭ ಅಕ್ಟೋಬರ್ 14, 2026ರಂದು ಸಂಜೆ 6.30ಕ್ಕೆ ಕಜಾನ್‌ನಲ್ಲಿ ನಡೆಯಲಿದೆ. ಸಮಕಾಲೀನ ಭಾರತೀಯ ನಿರ್ದೇಶಕರ ಆಯ್ದ ಚಿತ್ರಗಳನ್ನು ರಷ್ಯನ್ ಉಪಶೀರ್ಷಿಕೆಗಳೊಂದಿಗೆ ಪ್ರದರ್ಶಿಸುವ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಹಾಗೂ ಸಿನಿಮೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಕಾರ್ಯಕ್ರಮಕ್ಕಿದೆ. .

ಚಿತ್ರೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಪಿ. ಶೇಷಾದ್ರಿ ನಿರ್ದೇಶನದ ‘ರೂಬಿ ಕ್ಯೂಬ್’ ಪ್ರದರ್ಶನಗೊಳ್ಳಲಿದೆ. ಕನ್ನಡದ ಪ್ರಾದೇಶಿಕ ಚಿತ್ರವೊಂದು ರಷ್ಯಾದ ಪ್ರೇಕ್ಷಕರನ್ನು ತಲುಪುತ್ತಿರುವುದು ಕನ್ನಡ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯಕ್ಕೆ ಅವಕಾಶವನ್ನು ಕಲ್ಪಿಸುತ್ತಿದೆ.

ಚಿತ್ರೋತ್ಸವದ ಜೊತೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಿ. ಶೇಷಾದ್ರಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 15ರಂದು ಕಜಾನ್‌ನ ಸೆಂಟರ್ ಫಾರ್ ಯೂನಿಕ್ ಮಾಸ್ಟರಿಯಲ್ಲಿ ನಡೆಯಲಿರುವ “Filming the Future: Opportunities in India-Russia Cinema” (ಭವಿಷ್ಯದಲ್ಲಿ ಚಲನಚಿತ್ರ : ಭಾರತ ಮತ್ತು ರಷ್ಯಾದಲ್ಲಿ ಅವಕಾಶಗಳು) ಎಂಬ ಅಧಿವೇಶನದಲ್ಲಿ ಅವರು ಮಾತನಾಡಲಿದ್ದಾರೆ. ರಷ್ಯಾ–ಭಾರತ ಸಾಂಸ್ಕೃತಿಕ ಸಹಕಾರದ ಭವಿಷ್ಯ, ಅದರಲ್ಲಿನ ಸವಾಲುಗಳು ಹಾಗೂ ಅವಕಾಶಗಳ ಕುರಿತ ಈ ಅಧಿವೇಶನದಲ್ಲಿ ತಮ್ಮ ಚಿತ್ರರಂಗದ ಅನುಭವವನ್ನು ಹಂಚಿಕೊಳ್ಳಲು ಶೇಷಾದ್ರಿ ಅವರನ್ನು ಆಹ್ವಾನಿಸಲಾಗಿದೆ.

ಭಾರತೀಯ ಸಿನಿಮಾವನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರವಲ್ಲದೆ, ವಿವಿಧ ದೇಶಗಳ ಜನರ ನಡುವೆ ಸಾಂಸ್ಕೃತಿಕ ಸಂವಾದ ಮತ್ತು ಪರಸ್ಪರ ಅರಿವನ್ನು ಬೆಳೆಸುವ ಮಾಧ್ಯಮವಾಗಿ ಪರಿಚಯಿಸುವುದು ಚಿತ್ರೋತ್ಸವದ ಪ್ರಮುಖ ಆಶಯವಾಗಿದೆ. ಭಾರತೀಯ ನಿರ್ದೇಶಕರು, ನಿರ್ಮಾಪಕರು ಮತ್ತು ರಷ್ಯಾದ ಪ್ರೇಕ್ಷಕರ ನಡುವೆ ಸಂವಾದಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮತ್ತು ವಿತರಣೆಯ ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳನ್ನು ಅನ್ವೇಷಿಸಲು ಈ ವೇದಿಕೆ ಅವಕಾಶ ಒದಗಿಸಲಿದೆ ಎಂದು ಆಯೋಜಕರ ಆಹ್ವಾನದಲ್ಲಿ ತಿಳಿಸಲಾಗಿದೆ. ಈ ಭಾರತೀಯ ಚಿತ್ರೋತ್ಸವವು “TIME: Tatarstan Initiative Mutual Efficiency” ಎಂಬ ರಷ್ಯಾ–ಭಾರತ ವ್ಯವಹಾರ ವೇದಿಕೆಯ ಅಂಗವಾಗಿ ಅಕ್ಟೋಬರ್ 15 ಮತ್ತು 16ರಂದು ಕಜಾನ್‌ನಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕಜಾನ್‌ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವವು ಭಾರತೀಯ ಸಿನಿಮಾವನ್ನು ರಷ್ಯಾದ ಪ್ರೇಕ್ಷಕರಿಗೆ ಪರಿಚಯಿಸುವುದರ ಜೊತೆಗೆ, ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಸಂವಾದದ ವೇದಿಕೆಯನ್ನು ರೂಪಿಸುವ ಪ್ರಯತ್ನವಾಗಿದೆ. ಕನ್ನಡ ಚಿತ್ರ ‘ರೂಬಿ ಕ್ಯೂಬ್’ ಈ ಚಿತ್ರೋತ್ಸವದ ಭಾಗವಾಗಿರುವುದು ಕನ್ನಡ ಚಿತ್ರರಂಗಕ್ಕೆ ಸಾಂಸ್ಕೃತಿಕ ವಿನಿಮಯದಲ್ಲಿ ಒಂದು ಮಹತ್ವದ ಉಪಸ್ಥಿತಿ ಒದಗಿಸಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted