ಗೌರಿ ಹಬ್ಬದಂದು ಗಣೇಶನ ಸನ್ನಿಧಿಯಲ್ಲಿ ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರಕ್ಕೆ ಚಾಲನೆ . ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದ ನಾಯಕಿಯರಾಗಿ ರಚಿತಾರಾಮ್ ಹಾಗೂ ಮಲೈಕಾ .
“ಬನಾರಸ್” ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ಈ ವರ್ಷದ ಭರ್ಜರಿ ಹಿಟ್ “ಉಪಾಧ್ಯಕ್ಷ” ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ “ಕಲ್ಟ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಶ್ರೀಮತಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ(ಸಚಿವ ಜಮೀರ್ ಅಹಮದ್ ಖಾನ್ ಅವರ ತಾಯಿ) ಕ್ಯಾಮೆರಾ ಚಾಲನೆ ಮಾಡಿದರು. ಝೈದ್ ಖಾನ್, ರಚಿತಾ ರಾಮ್, ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮೊದಲು ಬಿಡುಗಡೆಯಾದ ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ “ಉಪಾಧ್ಯಕ್ಷ” ಖ್ಯಾತಿಯ ಮಲೈಕ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ALL OK ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ “ಕಲ್ಟ್ ” ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಲೋಕಿ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ , ರವಿವರ್ಮ ಸಾಹಸ ನಿರ್ದೇಶನ ಹಾಗೂ ಭೂಷಣ್ – ಸಂತು ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.