ಹೊಂಬಾಳೆ ಫಿಲಂಸ್ ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ “ಯುವ”
ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಯುವ ರಾಜಕುಮಾರ್
“ರಾಜಕುಮಾರ”, “ಕೆ.ಜಿ.ಎಫ್”, “ಕಾಂತಾರ” ದಂತಹ ಯಶಸ್ವಿ ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ ಹಾಗೂ ಸಂತೋಷ್ ಆನಂದರಾಮ್ ನಿರ್ದೇಶನದ “ಯುವ” ಚಿತ್ರ ಬಿಡುಗಡೆಯಾಗಿ ಎಲ್ಲರ ಮನ ಗಿದ್ದಿದೆ. ಹೊಂಬಾಳೆ ಫಿಲಂಸ್ ನ ಯಶಸ್ಸಿನ ಕಿರೀಟಕ್ಕೆ ಮತ್ತೊಂದು ಗರಿ “ಯುವ” ಚಿತ್ರ.
ದೊಡ್ಮನೆಯ ಕುಡಿ ಯುವ ರಾಜಕುಮಾರ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಮೊದಲ ಚಿತ್ರವಾಗಿರುವುದರಿಂದ ಸಾಕಷ್ಟು ನಿರೀಕ್ಷೆಗಳಿತ್ತು. ಆ ನಿರೀಕ್ಷೆಗಳಂತೆಯೇ ಚಿತ್ರ ಚೆನ್ನಾಗಿ ಬಂದಿದೆ. ನಟನೆಯಲ್ಲಿ ಯುವ ರಾಜಕುಮಾರ್ ಸೈ ಅನಿಸಿಕೊಂಡಿದ್ದಾರೆ. ಅದರಲ್ಲೂ ಆಕ್ಷನ್ ಸನ್ನಿವೇಶಗಳಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ಈ ಚಿತ್ರಕ್ಕಾಗಿ ಯುವ ರಾಜಕುಮಾರ್ ಅವರು ಪಟ್ಟಿರುವ ಶ್ರಮ ತೆರೆಯ ಮೇಲೆ ಎದ್ದು ಕಾಣುತ್ತದೆ. “ಯುವ ” ಮಧ್ಯಮವರ್ಗದ ಕುಟುಂಬದ ಕಥೆ. ಅಪ್ಪ-ಮಗನ ಬಾಂಧವ್ಯದ ಕಥೆ. ಅದರಲ್ಲೂ ರೆಸ್ಲಿಂಗ್ ನಲ್ಲಿ ತಾನು ಚಾಂಪಿಯನ್ ಆಗಬೇಕೆಂದು ಬಯಸುವ ಉತ್ತಮ ಕ್ರೀಡಾಪಟುವಿನ ಕಥೆ ಕೂಡ.. ಚಿತ್ರದ ನಾಯಕಿಯಾಗಿ ನಟಿಸಿರುವ ಸಪ್ತಮಿಗೌಡ ಅವರ ಅಭಿನಯ ಸೂಪರ್. ಅಪ್ಪನಾಗಿ ಅಭಿನಯಿಸಿರುವ ಅಚ್ಯುತಕುಮಾರ್ ಅವರಿಗೆ ಆತ್ಮೀಯ “ಅಪ್ಪುಗೆ”. ಅಮ್ಮನ ಪಾತ್ರದಲ್ಲಿ ಸುಧಾರಾಣಿ ಅವರದು ಅಮೋಘ ಅಭಿನಯ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಹಿತ ಚಂದ್ರಶೇಖರ್ ಕೂಡ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಹಾಗೂ ಶ್ರೀಶ ಕುದವಳ್ಳಿ ಅವರ ಛಾಯಾಗ್ರಹಣ “ಯುವ”ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಂಬಾಳೆ ಫಿಲಂಸ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅವರ ಕಾಂಬಿನೇಶನ್ ನಲ್ಲಿ “ರಾಜಕುಮಾರ” ನಂತರ ಮತ್ತೊಂದು ಉತ್ತಮ ಕೌಟುಂಬಿಕ ಚಿತ್ರ ಮೂಡಿಬಂದಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಕುಟುಂಬ ಸಮೇತ ಹೋಗಿ “ಯುವ” ಚಿತ್ರವನ್ನು ನೋಡಿ ಬನ್ನಿ. .