ಟ್ರೇಲರ್ ನಲ್ಲಿ ಸದ್ದು ಮಾಡುತ್ತಿದೆ ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” .
ಪತ್ರಕರ್ತ ಹಾಗೂ ಕಲಾವಿದನಾಗಿ ಗುರುತಿಸಿಕೊಂಡಿರುವ ಯತಿರಾಜ್ ನಿರ್ದೇಶನದ “ಸತ್ಯಂ ಶಿವಂ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಹಾಗೂ ಎರಡು ಹಾಡುಗಳ ಪ್ರದರ್ಶನ ಇತ್ತೀಚೆಗೆ ನಡೆಯಿತು. ನಿರ್ದೇಶಕ ದಯಾಳ್ ಪದ್ಮನಾಭನ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ತಮಿಳಿನ ಖ್ಯಾತ ನಿರ್ದೇಶಕ ಕೆ ಬಾಲಚಂದರ್, ಕಲಾವಿದರ ಬಾಡಿ ಲಾಂಗ್ವೇಜ್ ನ್ನೆ ಪಾತ್ರವನ್ನಾಗಿಸಿ ಅಭಿನಯ ತೆಗೆಸುತ್ತಿದ್ದರು. ಅದೇ ಫಾರ್ಮುಲವನ್ನೆ ಯತಿರಾಜ್ ಅನುಸರಿಸಿದಂತೆ ಕಾಣುತ್ತದೆ ಎಂದು ಮಾರ್ಮಿಕವಾಗಿ ದಯಾಳ್ ಹೇಳಿದರು.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಯತಿರಾಜ್ , “ಸತ್ಯಂ ಶಿವಂ” ಎಂದರೆ ಎರಡು ಪಾತ್ರಗಳ ಹೆಸರಲ್ಲ. ನಮ್ಮೊಳಗಿರುವ ಕೆಟ್ಟದ್ದನ್ನು ಹೊರಗೆ ಹಾಕಿ ನಿಶ್ಕಲ್ಮಶವಾದಾಗ ಸತ್ಯದ ದರ್ಶನವಾಗಿ ಶಿವನ ಅನುಭೂತಿಯಾಗುತ್ತದೆ. ಇದೇ ಕಥೆಯ ಸಾರಾಂಶ. ನಮ್ಮ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಸೆಂಟಿಮೆಂಟ್ ಎಲ್ಲವೂ ಇದೆ. ನಿರ್ಮಾಪಕರೂ ಆಗಿರುವ ಬುಲೆಟ್ ರಾಜು ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ “ಸತ್ಯಂ ಶಿವಂ” ಉತ್ತಮವಾಗಿ ಬಂದಿದೆ ಎಂದರು.
ಯತಿರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡೂ ಚೆನ್ನಾಗಿದೆ. ಯತಿರಾಜ್ ಅವರು ಹೇಳಿದ ಹಾಗೆ ಒಂದೇ ಹಂತದಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ಬುಲೆಟ್ ರಾಜು ತಿಳಿಸಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಹಾಡುಗಳ ಹಾಗೂ ಹಾಡಿದವರ ಪರಿಚಯ ಮಾಡಿಸಿದರು. ಸಾಹಸ ನಿರ್ದೇಶನದ ಬಗ್ಗೆ ಥ್ರಿಲ್ಲರ್ ಮಂಜು ಹೇಳಿದರು. ಛಾಯಾಗ್ರಾಹಕ ವಿದ್ಯಾ ನಾಗೇಶ್ ಮತ್ತು ನೃತ್ಯ ನಿರ್ದೇಶಕ ಫೈವ್ ಸ್ಟಾರ್ ಗಣೇಶ್ ಅವಕಾಶಕ್ಕಾಗಿ ಧನ್ಯವಾದ ಸಲ್ಲಿಸಿದರು.
ಸಂಜನ ನಾಯ್ಡು, ಮೈಕೋ ನಾಗರಾಜ್, ಅರವಿಂದ್ ರಾವ್, ಸಂಗೀತಾ, ಸುಂದರಶ್ರೀ , ತೇಜಸ್ವಿನಿ, ತನುಜಾ ಮುಂತಾದ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಿರಿ ಮ್ಯುಸಿಕ್ ಚಿಕ್ಕಣ್ಣ ನಿರ್ದೇಶಕ ಯತಿರಾಜ್ ಅವರಿಗೊಂದು ಮೊಬೈಲ್ ಗಿಫ್ಟ್ ನೀಡಿದ್ದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತ್ತು.