ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಅನಾವರಣವಾಯಿತು “ಉಪಾಧ್ಯಕ್ಷ” ಚಿತ್ರದ ಟೀಸರ್ .

ಹಾಸ್ಯ ನಟ ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿರುವ “ಉಪಾಧ್ಯಕ್ಷ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಉಮಾಪತಿ ಫಿಲಂಸ್ ಲಾಂಛನದಲ್ಲಿ ಸ್ಮಿತ ಉಮಾಪತಿ ನಿರ್ಮಸಿರುವ ಹಾಗೂ ಅನಿಲ್ ಕುಮಾರ್ ನಿರ್ದೇಶಿಸಿರುವ ಈ ಚಿತ್ರದ ಟೀಸರನ್ನು ಖ್ಯಾತ ನಟರಾದ ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಅಭಿಷೇಕ್ ಅಂಬರೀಶ್, ಧನ್ವೀರ್, ಪ್ರಥಮ್ ಹಾಗೂ ನಟಿ ಅದಿತಿ ಪ್ರಭುದೇವ ಬಿಡುಗಡೆ ಮಾಡಿ, ಚಿಕ್ಕಣ್ಣ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕರಾದ ಡಾ||ಸೂರಿ, ಮಹೇಶ್ ಕುಮಾರ್, ನಟ ಗರುಡ ರಾಮ್, ಆನಂದ್ ಆಡಿಯೋ ಶ್ಯಾಮ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು “ಉಪಾಧ್ಯಕ್ಷ” ಚಿತ್ರದ ಕುರಿತು ಮಾಹಿತಿ ನೀಡಿದರು.

ನಾನು ಕೆಲಸದೊತ್ತಡದಿಂದ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರಲಿಲ್ಲ. ಚಿತ್ರತಂಡದವರೆ ಎಲ್ಲವನ್ನು ನೋಡಿಕೊಂಡಿದ್ದಾರೆ. ಇದು “ಅಧ್ಯಕ್ಷ” ಚಿತ್ರದ ಮುಂದುವರೆದ ಭಾಗ. ಚಂದ್ರ ಮೋಹನ್ ಕಥೆ ಬರೆದಿದ್ದಾರೆ. ಚಿತ್ರಕಥೆಗೆ ನಿರ್ದೇಶಕರಾದ ಡಾ||ಸೂರಿ, ತರುಣ್ ಸುಧೀರ್ ಮುಂತಾದವರು ಸಹಾಯ ಮಾಡಿದ್ದಾರೆ. ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ ಈ ಚಿತ್ರದ ಮೂಲಕ ನಾಯಕರಾಗಿದ್ದಾರೆ. ಇಂದು ಟೀಸರ್ ಬಿಡುಗಡೆಯಾಗಿದೆ. ನವೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ಉಮಾಪತಿ ಶ್ರೀನಿವಾಸ್.

ನಾನು ಹದಿಮೂರು ವರ್ಷದಿಂದ ನೋಡಿರದ ಕಷ್ಟವನ್ನು “ಉಪಾಧ್ಯಕ್ಷ” ಚಿತ್ರದ ನಾಯಕ ಆದ ಕ್ಷಣದಿಂದ ನೋಡಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಾಯಕ ಚಿಕ್ಕಣ್ಣ, ನಾನು ಈ ಚಿತ್ರದ ನಾಯಕ ಅಂದಕೂಡಲೆ ಸಾಕಷ್ಟು ಜನ ಸಾಕಷ್ಟು ಮಾತನಾಡಿ ಮನಸ್ಸು ನೋಯಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ನಿರ್ಮಾಪಕ ಉಮಾಪತಿ ಅವರು ನನ್ನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿದ್ದಾರೆ. ಅಪಾರವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟೀಸರ್ ಬಿಡುಗಡೆ ಮಾಡಕೊಟ್ಟ ಎಲ್ಲಾ ನಟರಿಗೂ ನನ್ನ ಧನ್ಯವಾದವೆಂದರು ನಾಯಕ ಚಿಕ್ಕಣ್ಣ.

ಇದು ಟೀಸರ್ ಬಿಡುಗಡೆ ಸಮಾರಂಭ. ನಾನು ಹೆಚ್ಚು ಹೇಳುವುದೇನಿಲ್ಲ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಿಲ್ ಕುಮಾರ್.

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ನಾನು “ಉಪಾಧ್ಯಕ್ಷ” ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದೇನೆ ಎಂದ ನಾಯಕಿ ಮಲೈಕ, ಅವಕಾಶ ನೀಡಿದ್ದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು.

ಚಿತ್ರದಲ್ಲಿ ಅಭಿನಯಿಸಿರುವ ಅನೇಕ ಕಲಾವಿದರು ಹಾಗೂ ಕಾರ್ಯ ನಿರ್ವಹಿಸಿರುವ ತಂತ್ರಜ್ಞರು “ಉಪಾಧ್ಯಕ್ಷ” ಚಿತ್ರದ ಕುರಿತು ಮಾತನಾಡಿದರು.

Similar Posts

0 0 votes
Article Rating
Subscribe
Notify of
guest


0 Comments
Oldest
Newest Most Voted
Inline Feedbacks
View all comments