‘ಯೂಟ್ಯೂಬ್’ನಲ್ಲಿ ಟ್ರೆಂಡಾಯ್ತು, ಉತ್ತರ ಕರ್ನಾಟಕದ ‘ನೈಂಟಿ’!

ಕಳೆದ ವರ್ಷದ ಜೂನ್ ತಿಂಗಳಲ್ಲಿ ತೆರೆಕಂಡು ಸದ್ದು ಮಾಡಿದ್ದ ‘ನೈಂಟಿ ಬಿಡಿ ಮನೀಗ್ ನಡಿ’ ಚಿತ್ರ ಈಗ ಮತ್ತೆ ಸದ್ದು ಮಾಡತೊಡಗಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಯಶಸ್ವಿ ಪ್ರದರ್ಶನ ಕಂಡು, ಭರ್ಜರಿ ಹವಾ ಮಾಡಿಕೊಂಡಿದ್ದ ಈ ಚಿತ್ರವು, ಸದ್ಯ Panorama Cinetimes ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿ, ಟ್ರೆಂಡಿಂಗ್ ನಲ್ಲಿದೆ. ದಿನದಿಂದ ದಿನಕ್ಕೆ ವೀವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ, “ಆರ್ಗಾನಿಕ್ ಲಕ್ಷ ವೀವ್ಸ್” (100K) ದಾಟಿಸಿಕೊಂಡು ಭರ್ಜರಿಯಾಗಿ ಮುನ್ನುಗ್ಗುತ್ತಿದೆ.

‘ಅಮ್ಮಾ ಟಾಕೀಸ್ ಬಾಗಲಕೋಟ’ ಬ್ಯಾನರಿನಡಿ, ರತ್ನಮಾಲಾ ಬಾದರದಿನ್ನಿ ನಿರ್ಮಿಸಿದ್ದ ಈ “90”ಯಲ್ಲಿ, ಹಾಸ್ಯ ನಟ ‘ವೈಜನಾಥ ಬಿರಾದಾರ್’, ತನ್ನ ಎಪ್ಪತ್ತರ ವಯಸ್ಸಲ್ಲಿ ದಾಖಲೆ ಎಂಬಂತೆ, ಮೊದಲ ಬಾರಿಗೆ ‘ಕಮರ್ಶಿಯಲ್ ಹೀರೋ’ ಆಗಿ ಮಿಂಚಿದ್ದರು. ಚಿತ್ರದಲ್ಲಿನ “ಸಿಂಗಲ್ ಕಣ್ಣಾ ಹಾರಸ್ತಿ, ಡಬ್ಬಲ್ ಹಾರನ್ ಬಾರಸ್ತೀ” ಎಂಬ ಪಕ್ಕಾ ಉತ್ತರ ಕರ್ನಾಟಕದ ಜವಾರಿ ಹಾಡಿಗೆ, ತನ್ನ ಎಪ್ಪತ್ತರ ವಯಸ್ಸೂ ಕೂಡ ಸೋಲುವಂತೆ, ಭರ್ಜರಿ ಸ್ಟೆಪ್ ಹಾಕಿ ಜನಮನರಂಜಿಸಿದ್ದರು ಬಿರಾದಾರ್. ನಗುತ್ತಾ, ನಗಿಸುತ್ತಾ, ಅಳುತ್ತಾ, ಅಳಿಸುತ್ತಾ ಸಂದೇಶ ಹೇಳಿದ್ದ ಇವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಇಳಿ ವಯಸ್ಸಲ್ಲೂ ಬತ್ತದ ಅವರ ಉತ್ಸಾಹಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್, ಅಧ್ಯಕ್ಷ ಶರಣ್ ಸೇರಿದಂತೆ ಚಿತ್ರರಂಗದ ಗಣ್ಯರು ಶಹಬ್ಬಾಷ್ ಎಂದಿದ್ದರು. ಅದಕ್ಕೆ ತಕ್ಕನಾಗಿ ಬೆಂಗಳೂರಿನ ಗಾಂಧಿನಗರದ ‘ಅನುಪಮ ಥಿಯೇಟರ್’ ಮುಂದೆ ರಿಲೀಸ್ ದಿನ ‘ನಲವತ್ತು ಅಡಿ ಕಟೌಟ್’ ಹಾಕಿಸಿದ್ದ ಚಿತ್ರತಂಡ, ವೈಜನಾಥ ಬಿರಾದರರ ವೃತ್ತಿಜೀವನಕ್ಕೆ ಗೌರವ ಸಲ್ಲಿಸಿತ್ತು.

ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶಿಸಿದ್ದ ಈ ಚಿತ್ರವು, ಕುಡಿತ, ಜೂಜು, ಡ್ರಗ್ಗು, ಸ್ಮೋಕುಗಳ ಭಯಾನಕ ಲೋಕವನ್ನೇ ತೆರೆದಿಟ್ಟಿತ್ತು. ಚಿತ್ರ ಮನರಂಜನೆ ನೀಡುತ್ತಲೇ ಜೊತೆಗೊಂದಷ್ಟು ಆಪ್ತವಾದ ಸಂದೇಶ ಕೊಟ್ಟಿತ್ತು. ವೈಜನಾಥ ಬಿರಾದಾರ್ ಜೊತೆ ಕರಿಸುಬ್ಬು, ಧರ್ಮ,ನೀತಾ ಮೈಂದರ್ಗಿ, ಆರ್.ಡಿ ಬಾಬು, ಪ್ರಶಾಂತ್ ಸಿದ್ಧಿ, ಪ್ರೀತು ಪೂಜಾ, ವಿವೇಕ್ ಜಂಬಗಿ, ಅಭಯ್ ವೀರ್, ರಿಷಬ್ ಬಾದರದಿನ್ನಿ, ಮುರುಳಿ ಹೊಸಕೋಟೆ,ರಕ್ಷಿತ್ ಗೌಡ, ರವಿದೀಪ್ ದಳವಾಯಿ, ಲೋಕೇಶ್ ಮಾಲೂರು ತೆರೆ ಹಂಚಿಕೊಂಡಿದ್ದರು.
ಇದು ಉತ್ತರ ಕರ್ನಾಟಕದಲ್ಲಿ ನಡೆವ ಗಟ್ಟಿ ಕಥೆಗೆ, ಟೈಟ್ ಸ್ಕ್ರೀನ್ ಪ್ಲೇ ಕೂರಿಸಿ, ಕಚಕುಳಿ ಇಡುವ ಸಂಭಾಷಣೆಯೊಂದಿಗೆ ನೋಡಿಸಿಕೊಂಡು ಹೋಗುವ ಚಿತ್ರವಾಗಿಸಿದ್ದರಿಂದ, ಚಿತ್ರವು ಪ್ರೇಕ್ಷಕರಿಗೆ ರುಚಿಸಿತ್ತು. ಪತ್ರಿಕಾ- ಮಾಧ್ಯಮದ ಉತ್ತಮ ವಿಮರ್ಶೆಯೊಂದಿಗೆ “ನೈಂಟಿ” ಗೆದ್ದು ಬೀಗಿತ್ತು. ಕೃಷ್ಣ ನಾಯ್ಕರ್ ಛಾಯಾಗ್ರಹಣ, ಕಿರಣ್ ಶಂಕರ್ ಮತ್ತು ಶಿವು ಭೇರಗಿ ಸಂಗೀತ, ಭೂಷಣ್ ಕೊರಿಯೋಗ್ರಫಿ, ಯುಡಿವಿ ವೆಂಕಟೇಶ್ ಸಂಕಲನ, ರಾಕಿ ರಮೇಶ್ ಸ್ಟಂಟ್ಸ್, ವೀರ್ ಸಮರ್ಥ್ ಹಿನ್ನೆಲೆ ಸಂಗೀತವು, ಚಿತ್ರದ ಮೆರಗು ಹೆಚ್ಚಿಸಿ, ಗೆಲುವಿಗೆ ಸಾಥ್ ಕೊಟ್ಟವು‌. ಚಿತ್ರದಲ್ಲಿ ಮೂರು ಹಾಡುಗಳು, ಮೂರು ಭರ್ಜರಿ ಫೈಟುಗಳಿದ್ದು, ಪಕ್ಕಾ ಕಮರ್ಶಿಯಲ್ ಎಂಟರ್ಟೈನರ್ ಆಗಿರೋದ್ರಿಂದ ಉತ್ತರ ಕರ್ನಾಟಕದ ಪ್ರೇಕ್ಷಕರು ಬಲುಬೇಗ ಅಪ್ಪಿಕೊಂಡರು. ಅಂದಿಗೆ ಚಿತ್ರ ಐವತ್ತು ದಿನ ಪೂರೈಸಿ ಸಂಭ್ರಮ ಪಟ್ಟಿತ್ತು. ಇದೀಗ ಯೂಟ್ಯೂಬ್ ಮೂಲಕ ಮತ್ತೆ ಸದ್ದು ಮಾಡುತ್ತಾ, “ನೈಂಟಿ ನಶೆ” ಏರಿಸುತ್ತಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments