‘ಗರಡಿ’ಯಿಂದ ಬಂತು ಮೂರನೇ ಹಾಡು.
ವನಜಾ ಬಿ.ಸಿ ಪಾಟೀಲ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದ ಮೂರನೇ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಯೋಗರಾಜ್ ಭಟ್ ಅವರು ಬರೆದಿರುವ ‘ಬಡವನ ಹೃದಯ’ ಎಂಬ ಮನಸ್ಸಿಗೆ ಹತ್ತಿರವಾಗುವ ಈ ಹಾಡು ಸೋಮವಾರ ಬಿಡುಗಡೆಯಾಗಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕರುನಾಡ ಕಲಾರಸಿಕರು ತಲೆದೂಗುತ್ತಿದ್ದಾರೆ. ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿದ ಚಿತ್ರತಂಡ, ಪತ್ರಿಕಾಗೋಷ್ಠಿಯಲ್ಲಿ ಹಾಡಿನ ಬಗ್ಗೆ ವಿವರಣೆ ನೀಡಿತು.
ಎರಡನೇ ಲಾಕ್‌ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್, ಈ ಹಾಡು, ನನಗೆ ಹಾಗೂ ನಿರ್ಮಾಪಕರಿಗೆ ಅಚ್ಚುಮೆಚ್ಚು. ಬಾದಾಮಿ, ಬೆಂಗಳೂರು ಸೇರಿದಂತೆ ಅನೇಕ ಕಡೆ ಹಾಡಿನ ಚಿತ್ರೀಕರಣ ನಡೆದಿದೆ. ಹರಿಕೃಷ್ಣರ ಸಂಗೀತ, ವಿಜಯ್ ಪ್ರಕಾಶ್ ಗಾಯನ, ಸೂರ್ಯ, ಸೋನಾಲ್ ಮೊಂತೆರೊ ಹಾಗೂ ಸುಜಯ್ ಅವರ ಅಭಿನಯ ಚೆನ್ನಾಗಿದೆ. ‘ದಯಮಾಡಿ ಉರಿಸ ಬೇಡ ಬಡವನ ಹೃದಯ’ ಎಂಬ ಮೊದಲ ಸಾಲೇ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದರು.
ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡು ಕೇಳಿದಾಗ ನನಗೆ “ಮುಂಗಾರು ಮಳೆ” ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಹಾಡು ನೆನಪಾಯಿತು. ಈ ಹಾಡಿನ ಸಾಹಿತ್ಯ, ಗಾಯನ ಹಾಗೂ ನಟನೆ ಎಲ್ಲವೂ ಚೆನ್ನಾಗಿದೆ. ನವೆಂಬರ್ 1 ರಂದು ರಾಣಿಬೆನ್ನೂರಿನಲ್ಲಿ ಅದ್ದೂರಿಯಾಗಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ದರ್ಶನ್ ಅವರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ನವೆಂಬರ್ 10 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಹಾಗೂ ನಟ ಬಿ.ಸಿ.ಪಾಟೀಲ್.
ಈ ಹಾಡಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ‘ಬಡವನ ಹೃದಯ’ ಹಾಡು ಯೋಗರಾಜ್ ಭಟ್ ಅವರು ನನಗಾಗಿ ಬರೆದ ಹಾಗಿದೆ. ಈ ಹಾಡನ್ನು ದರ್ಶನ್ ಸರ್‌ಗೆ ಕೇಳಿಸಿದ್ದೆ. ಹಾಡಿನ ಸಾಹಿತ್ಯವನ್ನು ಅವರು ಬಹಳ ಇಷ್ಟ ಪಟ್ಟಿದ್ದರು. ವಿ.ಹರಿಕೃಷ್ಣ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ವಿಜಯ್ ಪ್ರಕಾಶ್ ಗಾಯನ ಹಾಗೂ ಮದನ್ – ಹರಿಣಿ ಅವರ ನೃತ್ಯ ನಿರ್ದೇಶನ ಹಾಡಿನ ಹೈಲೆಟ್ ಎಂದು ನಾಯಕ ಸೂರ್ಯ ತಿಳಿಸಿದರು.