ಹೊಂಬಾಳೆ ಫಿಲಂಸ್ ನಿರ್ಮಾಣದ ಬಘೀರ ಚಿತ್ರದ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ.ದೀಪಾವಳಿಗೆ ಬಘೀರನ ಅಬ್ಬರ ಶುರು; ಅ. 17ಕ್ಕೆ ಮೊದಲ ಹಾಡು
ಸ್ಯಾಂಡಲ್‌ವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಚಿತ್ರನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್. ಭಾರತೀಯ ಚಿತ್ರೋದ್ಯಮಕ್ಕೆ ಕೈ ಬಜೆಟ್ ಸಿನಿಮಾಗಳನ್ನು ನೀಡಿದ ಕೀರ್ತಿ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಅವರದ್ದು. ಕೆಜಿಎಫ್, ಕೆಜಿಎಫ್ 2, ಕಾಂತಾರ, ಸಲಾರ್ ಸಿನಿಮಾ ಮೂಲಕ ಬ್ಲಾಕ್ ಬಸ್ಟರ್ ಹಿಟ್ ನೀಡಿದೇ ಈ ಸಂಸ್ಥೆ. ಇದೀಗ ಇದೇ ಹೊಂಬಾಳೆ ಬತ್ತಳಿಕೆಯ ಮತ್ತೊಂದು ಹೊಸ ಸಿನಿಮಾ ಬಘೀರ. ಈ ಸಿನಿಮಾ ಇನ್ನೇನು ಇದೇ ಮಾಸಾಂತ್ಯಕ್ಕೆ ತೆರೆಗೆ ಬರಲಿದೆ. ಅದಕ್ಕೂ ಮೊದಲು ಈ ಚಿತ್ರದ ಮೊದಲ ಹಾಡು ಬಿಡುಗಡೆ ಆಗಲಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ನಟಿಸಿರುವ ಬಘೀರ ಚಿತ್ರ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಈ ಚಿತ್ರಕ್ಕೆ ಕೆಜಿಎಫ್ ಮತ್ತು ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ ಎಂಬುದು ಇನ್ನೊಂದು ಬಲ. ಆಕ್ಷನ್ ಟೀಸರ್ ಮೂಲಕವೇ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಮೊದಲ ಹಾಡು ರುಧೀರ ಧಾರಾ ಸಾಂಗ್ ಅಕ್ಟೋಬರ್ 17ರ ಬೆಳಗ್ಗೆ 10;35ಕ್ಕೆ ಬಿಡುಗಡೆ ಆಗಲಿದೆ. ಈ ಮೂಲಕ ಸಿನಿಮಾ ಪ್ರಚಾರಕ್ಕೆ ಧುಮುಕಲಿದೆ.
ಡಾಕ್ಟರ್ ಸೂರಿ ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನ ಮಾಡಿರುವ ಬಘೀರ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ. ತಾಂತ್ರಿಕ ಬಳಗದಲ್ಲಿ ಎ.ಜೆ ಶೆಟ್ಟಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ಪ್ರಣವ್ ಶ್ರೀ ಪ್ರಸಾದ್ ಸಂಕಲನ, ರವಿ ಸಂತೆಹಕ್ಲು ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆಕ್ಷನ್ ಸಿನಿಮಾ ಆಗಿರೋದ್ರಿಂದ ಚೇತನ್ ಡಿಸೋಜ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ.
ಅಕ್ಟೋಬರ್ 31ರ ದೀಪಾವಳಿ ಹಬ್ಬದ ಪ್ರಯುಕ್ತ ಹೊಂಬಾಳೆ ಫಿಲಂಸ್‌ನ ವಿಜಯ ಕಿರಗಂದೂರು ನಿರ್ಮಾಣ ಮಾಡಿರುವ ಬಘೀರ ಸಿನಿಮಾ ಬಿಡುಗಡೆ ಆಗಲಿದೆ. ಚಿತ್ರದ ಮೊದಲ ಹಾಡಿನ ಮೂಲಕ ಆಗಮಿಸುತ್ತಿರುವ ಬಘೀರ, ಮುಂದಿನ ಎರಡು ವಾರಗಳ ಕಾಲ ಪ್ರಮೋಷನ್ ಕೆಲಸದಲ್ಲಿ ಬಿಜಿಯಾಗಲಿದೆ. ಸಾಲು ಸಾಲು ಸರ್ಪ್ರೈಸ್‌ಗಳು ಸಿನಿಮಾಪ್ರಿಯರಿಗೆ ಸಿಗಲಿದೆ.