ನವೆಂಬರ್ 24ಕ್ಕೆ ಬಿಡುಗಡೆಯಾಗಲಿದೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’.
‘ಸ್ಯಾಂಡಲ್‍ವುಡ್ ಕ್ವೀನ್’ ರಮ್ಯಾ ಇದೇ ಮೊದಲ ಬಾರಿಗೆ ತಮ್ಮ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್‍ನಿಂದ ನಿರ್ಮಿಸಿರುವ, ರಾಜ್ ಬಿ ಶೆಟ್ಟಿ ಅಭಿನಯಿಸಿ-ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ನವೆಂಬರ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನೇತೃತ್ವದ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವು ಕಳೆದ ವರ್ಷ ವಿಜಯದಶಮಿಯ ದಿನದಂದು ಅಧಿಕೃತವಾಗಿ ಘೋಷಣೆಯಾಗಿತ್ತು. ಈಗ ಈ ವರ್ಷ ಅದೇ ದಿನದಂದು ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಲಾಗಿದೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಊಟಿ, ಮೈಸೂರು, ಕುದುರೆಮುಖ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಇದು ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೆಯ ಚಿತ್ರವಾಗಿದ್ದು, ಹಿಂದಿನ ಎರಡು ಚಿತ್ರಗಳಿಗಿಂತ ವಿಷಯ ಮತ್ತು ಮೇಕಿಂಗ್‍ನಲ್ಲಿ ಅತ್ಯಂತ ವಿಭಿನ್ನವಾಗಿದೆ.
‘ಸ್ವಾತಿ ಮುತ್ತಿನ ಮಳೆ ಹನಿಯೇ’ ಒಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ಜೆಪಿ ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ಮಿಥುನ್ ಮುಕುಂದನ್ ಅವರ ಸಂಗೀತವಿದೆ.