ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥರಿಂದ “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರದ ಹಾಡುಗಳ ಅನಾವರಣ .

ನಾಡಿನ ಪ್ರಸಿದ್ದ ಹರಿದಾಸರ ಜೀವನ ಚರಿತ್ರೆಯನ್ನು ಮಧುಸೂದನ್ ಹವಾಲ್ದಾರ್ ಅವರು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿಸುತ್ತಿದ್ದಾರೆ. ದಾಸಶ್ರೇಷ್ಠರಾದ “ಶ್ರೀಜಗನ್ನಾಥದಾಸರು”, ” ಶ್ರೀವಿಜಯದಾಸರು”, “ಶ್ರೀಮಹಿಪತಿದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಮುಂತಾದ ಮಹಾಮಹಿಮರ ಕುರಿತಾದ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದೆ. ಪ್ರಸ್ತುತ “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರ ಸಹ ತೆರೆಗೆ ಬರಲು ಸಿದ್ದವಾಗಿದ್ದು, ಇತ್ತೀಚೆಗೆ ಹಾಡುಗಳು ಅನಾವರಣವಾಗಿದೆ. ಗಾಯನ ಸಮಾಜದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಮಧುಸೂದನ್ ಹವಾಲ್ದಾರ್ ಹಾಗೂ ರಾಯಚೂರು ಶೇಷಗಿರಿದಾಸ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಎಂಟು ಹಾಡುಗಳಿದ್ದು, ಜನಪ್ರಿಯ ಗಾಯಕರು ಹಾಡಿದ್ದಾರೆ. ಸಮಾರಂಭದಲ್ಲಿ ಆರು ಹಾಡುಗಳನ್ನು ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ ನಾಡಿನ ಹೆಸರಾಂತ ದಾಸರಾದ 99 ವಯಸ್ಸಿನ ಶ್ರೀಅನಂತಾಚಾರ್ ಕಟಗೇರಿ ಅವರನ್ನು ಸನ್ಮಾನಿಸಲಾಯಿತು. ಈ ವಯಸ್ಸಿನಲ್ಲೂ ಕಟಗೇರಿ ದಾಸರು ವಿಜಯದಾಸರ ಕೀರ್ತನೆ ಹಾಡಿದ್ದು ಎಲ್ಲರ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯಿತು. ಖ್ಯಾತ ಗಾಯಕಿ ಸಂಗೀತ ಕಟ್ಟಿ ಅವರ ಅಮೋಘ ಗಾಯನ ಕೂಡ ಕೇಳುಗರನ್ನು ಬೇರಯದೆ ಲೋಕಕ್ಕೆ ಕರೆದುಕೊಂಡು ಹೋಯಿತು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಚಲನಚಿತ್ರ ತಂಡದವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಾಡುಗಳನ್ನು ಬಿಡುಗಡೆ ಮಾಡಿ ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಪಾದರು, ಮಧುಸೂದನ್ ಹವಾಲ್ದಾರ್ ಅವರು ಮಾಡುತ್ತಿರುವ ಕಾರ್ಯ ಬಹಳ ದೊಡ್ಡದು. ಅಶ್ಲೀಲ ಸಂಭಾಷಣೆಯಿಂದ ಕೂಡಿರುವ ಹಾಗೂ ಹೊಡಿಬಡಿ ಚಿತ್ರಗಳೆ ಹೆಚ್ಚು ಬರುತ್ತಿರುವ ಈ ಕಾಲದಲ್ಲಿ ನಾಡಿನ ಹರಿದಾಸರ ಬಗ್ಗೆ ಇಂದಿನ ಜನತೆಗೆ ಪರಿಚಯಿಸುವ ಚಿತ್ರಗಳನ್ನು ಮಧುಸೂದನ್ ಹವಾಲ್ದಾರ್ ಅವರು ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದರ ಉಪಯೋಗವನ್ನು ಹೆಚ್ಚಾಗಿ ಯುವಜನತೆ ಪಡೆದುಕೊಳ್ಳಬೇಕು. “ಶ್ರೀಜಗನ್ನಾಥದಾಸರು ಭಾಗ ೨” ಚಿತ್ರ ಅತ್ಯಂತ ಯಶಸ್ವಿಯಾಗಲಿ ಎಂದರು.

ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರೆ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments