ಹದಿಹರೆಯದವರ ತುಂಟಾಟದ ಕಥಾಹಂದರ ಹೊಂದಿರುವ “ಸ್ಕೂಲ್ ಡೇಸ್” ನವೆಂಬರ್ 24 ರಂದು ತೆರೆಗೆ .
ಉಮೇಶ್ ಎಸ್ ಹಿರೇಮಠ ನಿರ್ಮಾಣದಲ್ಲಿ ಸಂಜಯ್ ಹೆಚ್ ನಿರ್ದೇಶಿಸಿರುವ “ಸ್ಕೂಲ್ ಡೇಸ್” ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಮಾಜಿ ಶಾಸಕ ನೆ ಲ ನರೇಂದ್ರಬಾಬು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.
“ಸ್ಕೂಲ್ ಡೇಸ್” ಹೆಸರೆ ಹೇಳುವಂತೆ ಶಾಲೆಯ ದಿನಗಳ ಕುರಿತಾದ ಚಿತ್ರ. ಅದರಲ್ಲೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸುತ್ತಲ್ಲಿನ ಕಥೆ. ಈ ಚಿತ್ರ ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬಂದಿದೆ. ಉತ್ತರ ಕರ್ನಾಟಕದಲ್ಲೇ ಚಿತ್ರೀಕರಣ ನಡೆದಿದೆ. ಚಿತ್ರ ನೋಡಿದಾಗ ನಮ್ಮ “ಸ್ಕೂಲ್ ಡೇಸ್” ನೆನಪಾಗುವುದು ಖಚಿತ. ಹೆಚ್ಚಾಗಿ ಹೊಸ ಪ್ರತಿಭೆಗಳಿಗೆ ಈ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಯಿತು. ಚಿತ್ರ ಚೆನ್ನಾಗಿ ಬಂದಿದೆ. ಇದೇ ನವೆಂಬರ್ 24 ಚಿತ್ರ ಬಿಡುಗಡೆಯಾಗಲಿದೆ ನೋಡಿ ಹಾರೈಸಿ ಎಂದು ನಿರ್ದೇಶಕ ಸಂಜಯ್ ಹೆಚ್ ತಿಳಿಸಿದರು.
ನಾನು ಮೂಲತಃ ಉದ್ಯಮಿ ಎಂದು ಮಾತನಾಡಿದ ನಿರ್ಮಾಪಕ ಉಮೇಶ್ ಎಸ್ ಹಿರೇಮಠ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಸಿನಿಮಾ ನೋಡಿದಾಗ ನನ್ನ ಹಿಂದಿನ ದಿನಗಳು ನೆನಪಾದವು. ನವೆಂಬರ್ 24 ಚಿತ್ರ ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಬೆಂಬಲವಿರಲಿ ಎಂದರು.
ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಕೆ.ಎಂ.ಇಂದ್ರ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಅರ್ಜುನ್ ಬಳ್ಳಾರಿ, ಸಂಗಮ್ ಮಠದ್, ನೇಹಾ, ವಿವೇಕ್ ಜಂಬಗಿ ಮುಂತಾದವರು “ಸ್ಕೂಲ್ ಡೇಸ್” ಬಗ್ಗೆ ಮಾತನಾಡಿದರು.