ಕನ್ನಡ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಅನಾವರಣವಾಯಿತು “ಸಂಜು” ಚಿತ್ರದ ಸುಮಧುರ ಹಾಡುಗಳು .
ಪತ್ರಕರ್ತನಾಗಿ ನಂತರ ನಟನಾಗಿ ಈಗ ನಿರ್ದೇಶಕನಾಗಿಯೂ ಜನಪ್ರಿಯರಾಗಿರುವ ಯತಿರಾಜ್ ನಿರ್ದೇಶನದ “ಸಂಜು” ಚಿತ್ರದ ಹಾಡುಗಳು ಇತ್ತೀಚಿಗೆ ಬಿಡುಗಡೆಯಾಯಿತು. ನಿರ್ದೇಶಕರಾದ ಯೋಗರಾಜ್ ಭಟ್, ಮಠ ಗುರುಪ್ರಸಾದ್, ಗುರು ದೇಶಪಾಂಡೆ, ರವಿ.ಆರ್.ಗರಣಿ, ಪಿ.ಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ‘ಸಂಜು” ಚಿತ್ರಕ್ಕೆ ಶುಭ ಕೋರಿದರು. ವಿಜಯ್ ಹರಿತ್ಸ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು “ಸಂಜು” ಚಿತ್ರದ ಕುರಿತು ಮಾತನಾಡಿದರು.
“ಸಂಜು” ಚಿತ್ರಕ್ಕೆ “ಅಗಮ್ಯ ಪಯಣಿಗ” ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿಗಳಿದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ, ನನ್ನ ಇಡೀ ತಂಡಕ್ಕೆ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿದ ಸಮಸ್ತ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಯತಿರಾಜ್.
ಚಿತ್ರದ ನಾಯಕ ಮನ್ವೀತ್ ಮಾತನಾಡುತ್ತಾ, ನಾನು ಯಾವುದೇ ಸಿನಿಮಾ ಅಥವಾ ರಾಜಕೀಯ ಕುಟುಂಬದಿಂದ ಬಂದವನಲ್ಲ. ಸಾಮಾನ್ಯ ರೈತನ ಮಗ. ನನ್ನನ್ನು ಹೀರೋ ಮಾಡುವುದಕ್ಕಾಗಿ ಇಷ್ಟು ದುಡ್ಡು ಹಾಕಿರುವ ನಿರ್ಮಾಪಕರಿಗೆ ನಾನು ಆಬಾರಿ. ನನಗೆ ಮೊದಲು ನಿರ್ಮಾಪಕರು ಸಿಕ್ಕಿದ್ದರು. ಆನಂತರ ನಿರ್ದೇಶಕ ಯತಿರಾಜ್ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಪಕರು ಚಿತ್ರವನ್ನು ಆರಂಭಿಸಿದ್ದರು ಎಂದು ನಾಯಕ ಮನ್ವಿತ್ ತಿಳಿಸಿದರು.
ನಾಯಕಿಯಾಗಿ ನಟಿಸಿರುವ ರೇಖಾದಾಸ್ ಪುತ್ರಿ ಶ್ರಾವ್ಯ ‘ ಚಿತ್ರದಲ್ಲಿ ಸರಸ್ವತಿ(ಸರಸು)ಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ .ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ನನಗೆ ಯತಿರಾಜ್ ಅವರು ಹೇಳಿದ ಹಾಗೆ ಚಿತ್ರ ಮಾಡಿದ್ದಾರೆ. ಎಲ್ಲರ ಸಹಕಾರದಿಂದ “ಸಂಜು” ಚಿತ್ರ ಚೆನ್ನಾಗಿ ಬಂದಿದೆ. ಸದ್ಯದಲ್ಲೇ ತೆರೆಗೆ ತರುವುದಾಗಿ ನಿರ್ಮಾಪಕ ಸಂತೋಷ್ ಡಿ.ಎಂ ತಿಳಿಸಿದರು.
ಚಿತ್ರದಲ್ಲಿ ಎರಡು ಹಾಡುಗಳಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್ ಹಾಗೂ ನವೀನ್ ಸಜ್ಜು ಹಾಡಿದ್ದಾರೆ ಎಂದು ಹಾಡುಗಳು ಹಾಗೂ ಹಾಡಿದವರ ಬಗ್ಗೆ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಮಾಹಿತಿ ನೀಡಿದರು. ಛಾಯಾಗ್ರಾಹಕ ವಿದ್ಯಾ ನಾಗೇಶ್, ನೃತ್ಯ ನಿರ್ದೇಶಕರಾದ ಮದನ್ – ಹರಿಣಿ, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಹಾಗೂ ಚಿತ್ರದಲ್ಲಿ ನಟಿಸಿರುವ ಸಂಗೀತ, ಫ್ರೆಂಚ್ ಬಿರಿಯಾನಿ ಖ್ಯಾತಿಯ ಮಹಂತೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.