ವಿಷಯಲ್ ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದೆ ಸಂಯುಕ್ತ ಹೆಗಡೆ ಅಭಿನಯದ “ಕ್ರೀಂ” ಚಿತ್ರ.
“ಕಿರಿಕ್ ಪಾರ್ಟಿ” ಚಿತ್ರದ ಮೂಲಕ ಎಲ್ಲರ ಮನ ಗೆದ್ದಿರುವ ನಟಿ ಸಂಯುಕ್ತ ಹೆಗಡೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಕ್ರೀಂ” ಚಿತ್ರದ ವಿಷುಯಲ್ ಟ್ರೇಲರ್ ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಗಿದೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಈ ಚಿತ್ರದ ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದರು.
ಡಿ.ಕೆ.ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ.
ಈ ಚಿತ್ರದ ಬಗ್ಗೆ ತುಂಬಾ ಭರವಸೆಯಿಟ್ಟುಕೊಂಡಿದ್ದೇನೆ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ಎಲ್ಲಾ ಊರುಗಳಲ್ಲಿ, ಎಲ್ಲಾ ರಾಜ್ಯಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಕಾಣದ ಗರ್ಭ ಅಂತ ಇರುತ್ತದೆ. ಅಲ್ಲಿ ಏನೆಲ್ಲಾ ನಡೆಯುತ್ತದೆ. ಬೆಂಗಳೂರಿನಲ್ಲೇ ನನಗೆ ಗೊತ್ತಿರುವ ಸಂಗತಿಯಿಟ್ಟುಕೊಂಡು ಹತ್ತಾರು ವರ್ಷಗಳಿಂದ ಯೋಚನೆ ಮಾಡುತ್ತಿದೆ. ಸಿನಿಮಾ ಮಾಡಲು ಆಗಿರಲಿಲ್ಲ. ನಿರ್ಮಾಪಕ ದೇವೇಂದ್ರ ಅವರು ಸಿನಿಮಾ ಮಾಡಲೇಬೇಕು ಎಂದು ನನ್ನ ಒತ್ತಾಯಿಸಿದಾಗ ಈ ಚಿತ್ರದ ಕಥೆ ಹೇಳಿದೆ. ಈ ಚಿತ್ರ ಮಾಡುವುದಕ್ಕೆ ನಿಜವಾಗಿಯೂ ತುಂಬಾ ಧೈರ್ಯ ಬೇಕು. ಆ ಧೈರ್ಯವನ್ನು ದೇವೇಂದ್ರ ಮಾಡಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಎರಡೂವರೆ ಸಾವಿರ ಮಹಿಳೆಯರು ಒಂದಲ್ಲಾ ಒಂದು ಕಾರಣದಿಂದ ಬಲಿಯಾಗುತ್ತಿದ್ದಾರೆ? ಅದಕ್ಕೆ ಕಾರಣ ಏನು ಎಂಬುದನ್ನು ತಿಳಿಸುವ ಕಥೆ ಕೂಡ ಈ ಚಿತ್ರದಲ್ಲಿದೆ. ಇನ್ನೂ ಸಂಯುಕ್ತ ಹೆಗಡೆ ಈ ಚಿತ್ರಕ್ಕಾಗಿ ತನ್ನ ಜೀವವನ್ನೇ ಕೊಟ್ಟು ಬಿಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಈ ಚಿತ್ರದ ಮೂಲಕ ಅವರು ಇನ್ನೂ ಎತ್ತರಕ್ಕೆ ಹೋಗುತ್ತಾರೆ. ನಿರ್ದೇಶಕ ಅಭಿಷೇಕ್ ಬಸಂತ್ ನನ್ನ ತಮ್ಮನ ಮಗ. ಆತ ಬಹಳ ಬುದ್ದಿವಂತ. ತುಂಬಾ ಚೆನ್ನಾಗಿ ಚಿತ್ರ ಮಾಡಿದ್ದಾನೆ. ಶಿವು ಅವರ ಕಲಾ ನಿರ್ದೇಶನ ತುಂಬಾ ಚೆನ್ನಾಗಿದೆ ಎಂದು ತಿಳಿಸಿದರು.
ಚಿತ್ರತಂಡದ ಸಹಕಾರದಿಂದ ಇಪ್ಪತ್ತೆಂಟು ದಿನಗಳಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಇಂದು ವಿಷುಯಲ್ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ನಿಮ್ಮ ಮುಂದೆ ಚಿತ್ರ ಬರಲಿದೆ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ಈ ಚಿತ್ರದಲ್ಲಿ ಆಕ್ಷನ್ ಕೂಡ ಮಾಡಿದ್ದೇನೆ. ಕಾಲು ಕೂಡ ಮುರಿದಿತ್ತು. ಒಟ್ಟಿನಲ್ಲಿ ಎಲ್ಲರ ಶ್ರಮದಿಂದ “ಕ್ರೀಂ” ಚಿತ್ರ ಚೆನ್ನಾಗಿ ಬಂದಿದೆ. ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರ ಛಾಯಾಗ್ರಹಣ ಸುಂದರವಾಗಿದೆ. ಸಹಕಾರ ನೀಡಿದ ನಿರ್ದೇಶಕ, ನಿರ್ಮಾಪಕರಿಗೆ ಹಾಗೂ ವಿಶೇಷವಾಗಿ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ಎಂದರು ನಾಯಕಿ ಸಂಯುಕ್ತ ಹೆಗಡೆ.
ನಾನು ಮೊದಲು ಉತ್ತಮ ಕಥೆ ನೀಡಿರುವ ಅಗ್ನಿ ಶ್ರೀಧರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇಡೀ ತಂಡದ ಚಿತ್ರ ಚೆನ್ನಾಗಿ ಮೂಡಿಬರಲು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ಮಾಪಕ ಡಿ.ಕೆ.ದೇವೇಂದ್ರ ತಿಳಿಸಿದರು.
ಸಂಗೀತ ನಿರ್ದೇಶಕ ರೋಹಿತ್, ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಚಿತ್ರದಲ್ಲಿ ನಟಿಸಿರುವ ರೋಷನ್ ಅಗ್ನಿ ಶ್ರೀಧರ್ ಬಚ್ಚನ್, ಇಫ್ರಾನ್ ಮುಂತಾದವರು “ಕ್ರೀಂ” ಚಿತ್ರದ ಕುರಿತು ಮಾತನಾಡಿದರು.
ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನವರಸನ್, ಶ್ರೇಯಸ್ ಮೀಡಿಯಾ ಶ್ರೀನಿವಾಸ್ ಹಾಗೂ ನಿರ್ದೇಶಕ ಜಡೇಶ್ ಕೆ ಹಂಪಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.