ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ ಅವರಿಂದ ಬಿಡುಗಡೆಯಾಯಿತು “ರಾವುತ” ಚಿತ್ರದ ಹಾಡುಗಳು .”ರಾವುತ” ಇದು ಸಾವಿನ ನಂತರದ ಕಥೆ .
ವಿಶ್ವಕರ್ಮ ಸಿನಿಮಾಸ್ ಲಾಂಛನದಲ್ಲಿ ಈರಣ್ಣ ಸುಭಾಷ್ ಬಡಿಗೇರ್ ನಿರ್ಮಿಸಿರುವ, ಸಿದ್ದುವಜ್ರಪ್ಪ ನಿರ್ದೇಶನದ ಹಾಗೂ ರಾಜ್ ಪ್ರವೀಣ್ ನಾಯಕನಾಗಿ ನಟಿಸಿರುವ “ರಾವುತ” ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.ಕಾಂಗ್ರೆಸ್ ಮುಖಂಡ ಹೆಚ್ ಎಂ ರೇವಣ್ಣ “ರಾವುತ” ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಿರಿ ಮ್ಯೂಸಿಕ್ ನಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹಾಡುಗಳ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇದು ನನ್ನ ಮೊದಲ ನಿರ್ದೇಶನದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಸಿದ್ದು ವಜ್ರಪ್ಪ, ಇದು ಸಾವಿನ ನಂತರ ನಡೆಯುವ ಕಥೆ. ಈ ಕುರಿತು ನಾನು ಪುಸ್ತಕಗಳನ್ನು ಓದಿ ತಿಳಿದುಕೊಂಡಿದ್ದೇನೆ. ಗರುಡ ಪುರಾಣದ ಕೆಲವು ಅಂಶಗಳು ಹಾಗೂ ನಾನು ಚಿಕ್ಕವಯಸ್ಸಿನಲ್ಲಿ ಕಂಡಿದ್ದ ಕೆಲವು ಘಟನೆಗಳು ಈ ಕಥೆಗೆ ಸ್ಪೂರ್ತಿ. ಚಿತ್ರದ ನಾಯಕನಾಗಿ ರಾಜ್ ಪ್ರವೀಣ್ ಅಭಿನಯಿಸಿದ್ದಾರೆ. ಶಿವಬಸವ ಹಾಗೂ ಬಲ್ಲವ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿ ಭವಾನಿ ಪುರೋಹಿತ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿದ್ದು ಸುಚಿನ್ ಶರ್ಮ ಸಂಗೀತ ನೀಡಿದ್ದಾರೆ. ವಿನಯ್ ಗೌಡ ಈ ಚಿತ್ರದ ಛಾಯಾಗ್ರಹಕರು. ಇತ್ತೀಚೆಗೆ ಚಿತ್ರದ ಸೆನ್ಸಾರ್ ಸಹ ಮುಗಿದಿದ್ದು, ಮಂಡಳಿಯಿಂದ ಚಿತ್ರಕ್ಕೆ ಮೆಚ್ಚುಗೆ ಮಾತುಗಳು ಕೇಳಿಬಂದಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದರು.
ಇದು ನನ್ನ ಅಭಿನಯದ ಮೂರನೇ ಚಿತ್ರ. ನಿರ್ದೇಶಕರು ಹಾಗೂ ನನ್ನದು ಎಂಟು ವರ್ಷಗಳ ಗೆಳೆತನ. ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಕಥೆ ಮೆಚ್ಚಿ, ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯಾವಾದ. ನಿರ್ದೇಶಕರು ಹೇಳಿದ ಹಾಗೆ ನಾನು ಈ ಚಿತ್ರದಲ್ಲಿ ಎರಡಲ್ಲ, ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ರಾಜ್ ಪ್ರವೀಣ್.
ನಾನು ಮೂಲತಃ ಐಟಿ ಉದ್ಯೋಗಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಈರಣ್ಣ ಸುಭಾಷ್ ಬಡಿಗೇರ್.
ನಾಯಕಿ ಭವಾನಿ ಪುರೋಹಿತ್, ಸಂಗೀತ ನಿರ್ದೇಶಕ ಸುಚಿನ್ ಶರ್ಮ, ಸಿರಿಚಿಕ್ಕಣ್ಣ, ರಾಘವ್ ಗೌಡಪ್ಪ, ಮಾರೇಶ್, ನರಸಿಂಹ ಹಾಗೂ ಹರ್ಷ ವರ್ಧನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.