“ರೋಜಿ” ಚಿತ್ರದಲ್ಲಿ ಒರಟ ಪ್ರಶಾಂತ್ .
ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜಿ”. ಈ ಚಿತ್ರದಲ್ಲಿ ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟ ಒರಟ ಪ್ರಶಾಂತ್ “ರೋಜಿ” ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸ್ವಾಮಿ ಅಣ್ಣ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಒರಟ ಪ್ರಶಾಂತ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಚಿತ್ರತಂಡದಿಂದ ಬಿಡುಗಡೆಯಾಗಿದೆ. “ರೋಜಿ” ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.
“ರೋಜಿ” ಚಿತ್ರ ಸ್ಟೈಲೀಶ್ ಗ್ಯಾಂಗ್ ಸ್ಟರ್ ಡ್ರಾಮ ಎಂದು ಮಾತನಾಡಿದ ನಿರ್ದೇಶಕ ಶೂನ್ಯ, ಒರಟ ಪ್ರಶಾಂತ್ ಬಹಳ ದಿನಗಳ ನಂತರ ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. “ಸ್ವಾಮಿ ಅಣ್ಣ” ಎನ್ನುವುದು ಅವರ ಪಾತ್ರದ ಹೆಸರು. ಚಿತ್ರದಲ್ಲಿ ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಸದ್ಯದಲ್ಲೇ ಮಾಹಿತಿ ನೀಡುತ್ತೇನೆ ಎಂದರು.
ನನಗೆ ಬಹಳ ಅವಕಾಶಗಳು ಬಂದವು. ಆದರೆ, ನಾನು ಒಪ್ಪಿರಲಿಲ್ಲ. ಶೂನ್ಯ ಅವರು ಹೇಳಿದ ಕಥೆ ಹಾಗೂ ನನ್ನ ಪಾತ್ರ ಇಷ್ಟವಾಯಿತು. ಹಾಗಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಯೋಗಿ ಅವರ ಜೊತೆಗೆ ಅಭಿನಯಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರತ್ತಿದೆ ಎಂದು ಒರಟ ಪ್ರಶಾಂತ್ ತಿಳಿಸಿದರು.
ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಎಲ್ಲಾ ಹಾಡುಗಳು ಕಥೆಗೆ ಪೂರಕವಾಗಿರುತ್ತದೆ. ನಾನು ಇತ್ತೀಚಿಗೆ ಹೊಸಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕೊರೋನ ನಂತರ ನಾನು ಒಪ್ಪಿಕೊಂಡಿರುವ ಚಿತ್ರ “ರೋಜಿ” ಎಂದು ತಿಳಿಸಿದ ಸಂಗೀತ ನಿರ್ದೇಶಕ ಗುರುಕಿರಣ್, ನಾನು ಚಿತ್ರರಂಗಕ್ಕೆ ಬಂದು ಇಪ್ಪತ್ತೈದು ವರ್ಷಗಳಾಯಿತು. ಈ ಸಮಯದಲ್ಲಿ ನನ್ನ “ಕರಿಮಣಿ ಮಾಲೀಕ” ಹಾಡು ಈಗ ಸಾಕಷ್ಟು ಟ್ರೆಂಡ್ ಆಗುತ್ತಿರುವುದಕ್ಕೆ ಸಂತಸಪಟ್ಟರು.
ನಿರ್ಮಾಪಕರಾದ ಡಿ.ವೈ.ರಾಜೇಶ್, ಡಿ.ವೈ.ವಿನೋದ್, ಛಾಯಾಗ್ರಾಹಕ ಎಸ್ ಕೆ ರಾವ್ ಹಾಗೂ ಸಂಕಲನಕಾರ ಹರೀಶ್ ಕೊಮ್ಮೆ “ರೋಜಿ” ಚಿತ್ರದ ಕುರಿತು ಮಾತನಾಡಿದರು.