ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಟಾಪನೆ ದಿನದಂದೇ ಅಂಜನಾದ್ರಿ ಬೆಟ್ಟದಲ್ಲಿ “ಅಯೋಧ್ಯಾ ರಾಮ” ಚಿತ್ರಕ್ಕೆ ಚಾಲನೆ .
ಜನವರಿ 22 ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆಯಾದ ಪರ್ವದಿನ. ಅದೇ ಸುಮೂಹರ್ತದಲ್ಲಿ ಆಂಜನೇಯನ ಜನ್ಮಭೂಮಿಯಾದ ಅಂಜನಾದ್ರಿಯಲ್ಲಿ “ಅಯೋಧ್ಯಾ ರಾಮ” ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.
ಈ ಹಿಂದೆ “ಶ್ರೀಜಗನ್ನಾಥ ದಾಸರು”, ” ಶ್ರೀ ಪ್ರಸನ್ನವೆಂಕಟದಾಸರು” ಸೇರಿದಂತೆ ಅನೇಕ ದಾಸವರೇಣ್ಯರ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ಜನಪ್ರಿಯರಾಗಿರುವ ಡಾ|| ಮಧುಸೂದನ್ ಹವಾಲ್ದಾರ್ ತಮ್ಮ ಮಾತಾಂಬುಜ ಮೂವೀಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಇಂದಿನಿಂದ ಈ ಪೌರಾಣಿಕ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಕನ್ನಡ ಸೇರಿದಂತೆ ಹನ್ನೆರಡು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ವಿಕ್ರಮ್ ಜೋಶಿ ಈ ಚಿತ್ರದ ನಾಯಕನಾಗಿ ಹಾಗೂ ಶ್ರೀಲತ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಚಿತ್ರರಂಗದ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ವಿಜಯ್ ಕೃಷ್ಣ ಸಂಗೀತ ನಿರ್ದೇಶನ, ನಾರಾಯಣ್ ಛಾಯಾಗ್ರಹಣ, ಆರ್ ಡಿ ರವಿ ಅವರ ಸಂಕಲನವಿರುವ “ಅಯೋಧ್ಯಾ ರಾಮ” ಚಿತ್ರಕ್ಕೆ ತೀರ್ಥರಾಜ್ ಡಿ ಹಾಗೂ ರವಿಶಂಕರ್ ಸಹ ನಿರ್ಮಾಣವಿದೆ. ಪ್ರಶಾಂತ್ ಕುಷ್ಟಗಿ ಅವರ ಸಹಕಾರವಿರುವ ಈ ಚಿತ್ರವನ್ನು ಹನ್ನೆರಡು ಭಾಷೆಗಳಲ್ಲಿ ಒಂದು ವರ್ಷದಲ್ಲಿ ಬಿಡುಗಡೆ ಮಾಡುವ ಯೋಜನೆಯಿದೆ ಎಂದು ನಿರ್ದೇಶಕ ಡಾ|| ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.