“NH 66” ನಲ್ಲಿ ಪ್ರಮೋದ್ ಶೆಟ್ಟಿ ಪ್ರಯಾಣ‌

ಮಂಜುನಾಥ್ ಟಿ.ಆರ್ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಶೃತಿ ಹರಿಹರನ್ .

ರಾಯ ಫಿಲಂಸ್ ಲಾಂಛನದಲ್ಲಿ ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್, ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ನೂತನ ಚಿತ್ರದ ಮುಹೂರ್ತ ಹಾಗೂ ಶೀರ್ಷಿಕೆ ಅನಾವರಣ ಸಮಾರಂಭ ರಾಜರಾಜೇಶ್ವರಿ ನಗರದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನೆರವೇರಿತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “NH 66” ಎಂದು ಹೆಸರಿಡಲಾಗಿದೆ. ನಟ ಉಗ್ರಂ ಮಂಜು ಸೇರಿದಂತೆ ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು‌.

ನಾನು ಹಿರಿಯ ನಿರ್ದೇಶಕ ಭಾರ್ಗವ ಅವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೆ. ನಂತರ ಕಾರಣಾಂತರದಿಂದ ವಿದೇಶಕ್ಕೆ ತೆರಳಿದೆ. ಅಲ್ಲಿಯೇ ಸ್ಕ್ರಿಪ್ಟ್ ರಚನೆ , ಚಿತ್ರಕಥೆ ಬಗ್ಗೆ ವಿಶೇಷ ಅಧ್ಯಯನ ನಡಿಸಿದೆ. ಈಗ ಇಲ್ಲಿಗೆ ಬಂದು ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಆರಂಭಿಸಿದ್ದೇನೆ. ರಾಯರ ಪರಮಭಕ್ತನಾದ ನಾನು ಅವರ ಹೆಸರಿನಲ್ಲಿಯೇ ರಾಯ ಫಿಲಂಸ್ ಎಂಬ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದೇನೆ. “NH 66” ಹೆಸರೆ ಹೇಳುವಂತೆ ಒಂದು ರೋಡ್ ಸ್ಟೋರಿ. ಥ್ರಿಲ್ಲರ್ ಡ್ರಾಮ ಜಾನರ್ ನ ಚಿತ್ರವೂ ಹೌದು. ಪ್ರಮೋದ್ ಶೆಟ್ಟಿ ಹಾಗೂ ಶೃತಿ ಹರಿಹರನ್ ಅವರಿಗೆ ಈ ಚಿತ್ರದ ಕಥೆ ಹೇಳಿದಾಗ, ಕಥೆ ಇಷ್ಟಪಟ್ಟು ಈ ಚಿತ್ರದಲ್ಲಿ ನಟಿಸಲು ಒಪ್ಪಿದರು. ರಾಜೇಶ್ ನಟರಂಗ ಅವರು ಕೂಡ ಪ್ರಮುಖಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಎರಡು ರಾತ್ರಿಗಳಲ್ಲಿ ಮಂಗಳೂರಿನಿಂದ ಗೋವಾಗೆ ಹೋಗುವ ಮಧ್ಯದಲ್ಲಿ ನಡೆಯುವ ಕಥೆಯಾಗಿದ್ದು, ಮೂರು ಅಥವಾ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತದೆ. “NH 66” ಚಿತ್ರಕ್ಕೆ “ಒನ್ ಹೈವೆ. ಮೆನಿ ಸೀಕ್ರೆಟ್ಸ್” ಎಂಬ ಅಡಿಬರಹವಿದೆ. ಏಪ್ರಿಲ್ 6 ರಿಂದ ಮಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಸ್ವಾಮಿನಾಥನ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಮಂಜುನಾಥ್ ಟಿ.ಆರ್ ತಿಳಿಸಿದರು.

ಮಂಜುನಾಥ್ ಅವರು ಹೇಳಿದ ಕಥೆ ಇಷ್ಟವಾಯಿತು. ಅವರೆ ಹೇಳಿದ ಹಾಗೆ ಇದೊಂದು ರೋಡ್ ಸ್ಟೋರಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ನಾನು ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಅವರ ಜೊತೆಗೆ ನಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ರಾಯರ ಭಕ್ತರಾದ ಮಂಜುನಾಥ್ ಅವರು ತಮ್ಮ ಮೊದಲ ನಿರ್ದೇಶನದ ಚಿತ್ರವನ್ನು ರಾಯರ ಸನ್ನಿಧಿಯಲ್ಲೇ ಆರಂಭಿಸಿದ್ದಾರೆ. ರಾಯರು ಅವರಿಗೆ ಒಳ್ಳೆಯದು ಮಾಡಲಿ ಎಂದರು ನಟ ಪ್ರಮೋದ್ ಶೆಟ್ಟಿ.

ಮಂಜುನಾಥ್ ಅವರಿಗೆ ಸಿನಿಮಾ ಮೇಲೆ ಇರುವ ಪ್ರೀತಿ ಹಾಗೂ ಅವರು ಕಥೆ ಹೇಳಿದ ರೀತಿ ಬಹಳ ಇಷ್ಟವಾಯಿತು. ನಾನು ಈವರೆಗೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಈವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇನೆ. ಪ್ರಮೋದ್ ಶೆಟ್ಟಿ ಅವರ ಜೊತೆಗೆ ಅಭಿನಯಿಸುತ್ತಿರುವುದು ಖುಷಿಯಾಗಿದೆ ಎಂದು ನಟಿ ಶೃತಿ ಹರಿಹರನ್ ಹೇಳಿದರು.

ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ಸಂಗೀತ ನಿರ್ದೇಶಕ ಸ್ವಾಮಿನಾಥನ್ ಅವರು ‘NH 66’ ಚಿತ್ರದ ಕುರಿತು ಮಾತನಾಡಿದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments