ಲಿಖಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಡುಗಡೆಯಾಯಿತು “ಫುಲ್ ಮೀಲ್ಸ್” ಚಿತ್ರದ ಮೋಷನ್ ಪೋಸ್ಟರ್.
“ಸಂಕಷ್ಟಕರ ಗಣಪತಿ”, “ಫ್ಯಾಮಿಲಿ ಪ್ಯಾಕ್”, “ಅಬ್ಬಬ್ಬ” ಚಿತ್ರಗಳ ಖ್ಯಾತಿಯ ನಟ ಲಿಖಿತ್ ಶೆಟ್ಟಿ, ಪ್ರಸ್ತುತ ‘ಫುಲ್ ಮೀಲ್ಸ್’ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕ ನಟನಾಗೂ ನಟಿಸುತ್ತಿದ್ದಾರೆ. “ಫುಲ್ ಮೀಲ್ಸ್” ಚಿತ್ರದ ನಾಯಕ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ “ಫುಲ್ ಮೀಲ್ಸ್” ಚಿತ್ರತಂಡ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.
ಲಿಖಿತ್ ಶೆಟ್ಟಿ ಇಬ್ಬರು ನಾಯಕಿಯರ ಸಾಂಗತ್ಯದಲ್ಲಿರುವ ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಸುಂದರವಾದ ಮೋಷನ್ ಪೋಸ್ಟರ್ ನೋಡುಗರ ಗಮನ ಸೆಳೆದಿದ್ದು, ಸಿನೆಮಾದ ಬಗ್ಗೆ ಕುತೂಹಲ ಮೂಡಿಸಿದೆ.
ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಸಂಪೂರ್ಣವಾಗಿದ್ದು, ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ. ವರ್ಷಾಂತ್ಯದೊಳಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿರುವುದಾಗಿ ಲಿಖಿತ್ ಶೆಟ್ಟಿ ತಿಳಿಸಿದ್ದಾರೆ.
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಲಿಖಿತ್ ಶೆಟ್ಟಿಯವರಿಗಿದೆ.
ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನೆಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಲಿಖಿತ್ ಶೆಟ್ಟಿ ಅವರಿಗೆ ನಾಯಕಿಯರಾಗಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದು, ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.