ಹಲವು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಯಾಯಿತು ಸ್ನೇಹದ ಮಹತ್ವ ಸಾರುವ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳು.
ಶ್ರೀ ಚಾಮುಂಡೇಶ್ವರಿ ಪಿಕ್ಚರ್ಸ್ ಲಾಂಛನದಲ್ಲಿ ನಾಗರತ್ನಮ್ಮ ಅವರು ನಿರ್ಮಿಸಿರುವ, ಮೈಸೂರು ರಾಜು ನಿರ್ದೇಶನದ “ಕುಚುಕು” ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ನಿರ್ಮಾಪಕ – ವಿತರಕ ಎಂ ಎನ್ ಕುಮಾರ್, ನಿರ್ಮಾಪಕ ಎಂ ಡಿ ಪಾರ್ಥಸಾರಥಿ, ಅದಿತಿ(ವಕೀಲರು), ನೃತ್ಯ ನಿರ್ದೇಶಕ ಜಗ್ಗು ಮಾಸ್ಟರ್ ಸೇರಿದಂತೆ ಅನೇಕ ಗಣ್ಯರು ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ನಾನು 26ವರ್ಷಗಳಿಂದ ಡ್ಯಾನ್ಸರ್ ಹಾಗೂ ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಹಿಂದೆ “ನೃತ್ಯಂ” ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸ್ನೇಹದ ಮಹತ್ವ ಸಾರುವ ಕಥಾಹಂದರದ ಜೊತೆಗೆ ಸೆಂಟಿಮೆಂಟ್ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿದೆ. ಮೈಸೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದೆ ಎಂದು ತಿಳಿಸಿದರು.
ನಾನು ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು. ಈಗ ನಾಯಕನಾಗಿದ್ದೇನೆ. ಇದು ನನ್ನ ಅಭಿನಯದ ಮೂರನೇ ಚಿತ್ರ. ಹೆಸರೆ ತಿಳಿಸುವಂತೆ ಸ್ನೇಹಿತರ ಕುರಿತಾದ ಚಿತ್ರದಲ್ಲಿ ನಾನು ಒಬ್ಬ ಸ್ನೇಹಿತ ಎಂದು ನಾಯಕ ಅರ್ಜುನ್ ಚೋಹಾನ್ ತಿಳಿಸಿದರು.
ಗುಲ್ಬರ್ಗ ಮೂಲದವನಾದ ನಾನು ಮೂಲತಃ ರಂಗಭೂಮಿ ಕಲಾವಿದ. ಈ ಚಿತ್ರದಲ್ಲಿ ನಾನು ಹಾಗೂ ಅರ್ಜುನ್ “ಕುಚುಕು”ಗಳಾಗಿ ನಟಿಸಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ನಾಯಕ ಬಸವರಾಜ್ ಕುಮಾರ್. ಈ ಚಿತ್ರದಲ್ಲಿರುವ ಬಹುತೇಕರು ಮೈಸೂರಿನವರು. ನಾನು ಕೂಡ ಮೈಸೂರಿನವನು. ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದೇನೆ ಎಂದರು ನಟ ಶೈಕ್ ಶಿವಾಜಿ.
ಸಿನಿಮಾ ಮೇಲಿನ ಪ್ರೀತಿಯಿಂದ ಕಷ್ಟಪಟ್ಟು ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕಿ ನಾಗರತ್ನಮ್ಮ ಹೇಳಿದರು. ಚಿತ್ರದಲ್ಲಿ ಐದು ಸುಮಧುರ ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಎ.ಟಿ.ರವೀಶ್ ತಿಳಿಸಿದರು. ಅರ್ಜುನ್ ಚೋಹಾನ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವಥ್, ಬಲ ರಾಜ್ವಾಡಿ, ಶೈಕ್ ಶಿವಾಜಿ , ಹನುಮಂತೇ ಗೌಡ, ಬಿ.ಡಿ.ಜತ್ತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.