ಬ್ಯಾಕ್ ಬೆಂಚರ್ಸ್‍ಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ !
ನಿರ್ದೇಶಕ ರಾಜಶೇಖರ್ ಸೇರಿದಂತೆ ಒಂದಿಡೀ ಚಿತ್ರತಂಡ ಖುಷಿಯ ಮೂಡಿನಲ್ಲಿದೆ. ಒಂದು ಹೊಸಬರ ತಂಡ ಕಟ್ಟಿಕೊಂಡು `ಬ್ಯಾಕ್ ಬೆಂಚರ್ಸ್’ ಚಿತ್ರವನ್ನು ರೂಪಿಸುವ ಸಾಹಸ ಮಾಡಿದ್ದವರು ರಾಜಶೇಖರ್. ಇದೀಗ ಈ ಚಿತ್ರ ಬಿಡುಗಡೆಗೊಂಡು ವಾರ ಕಳೆಯುವ ಮುನ್ನವೇ, ರಾಜ್ಯದ ನಾನಾ ಭಾಗಗಳಲ್ಲಿ ಭರ್ಜರಿ ಓಪನಿಂಗ್ ಸಿಗಲಾರಂಭಿಸಿದೆ. ಹೊಸತವನ್ನೇ ಆತ್ಮವಾಗಿಸಿಕೊಂಡಂತಿರುವ ಈ ಕಾಲೇಜು ಕೇಂದ್ರಿತ ಕಥೆಗೆ ನೋಡುಗರೆಲ್ಲ ಫಿದಾ ಆಗಿದ್ದಾರೆ. ಬಾಯಿಂದ ಬಾಯಿಗೆ ಹಬ್ಬಿಕೊಳ್ಳುತ್ತಿರುವ ಸದಭಿಪ್ರಾಯಗಳೇ ಸಿನಿಮಾ ಮಂದಿರಗಳು ಭರ್ತಿಯಾಗುವಂಥಾ ಕಮಾಲ್ ಮಾಡುತ್ತಿವೆ. ಇದೇ ರೀತಿ ಮುಂದುವರೆದರೆ ಬ್ಯಾಕ್ ಬೆಂಚರ್ಸ್‍ಗೆ ನಿರೀಕ್ಷೆಗೂ ಮೀರಿದ ಗೆಲುವು ದಕ್ಕುವುದರಲ್ಲಿ ಯಾವ ಸಂಶಯವೂ ಇಲ್ಲ.
ಅಷ್ಟಕ್ಕೂ ಆರಂಭದಲ್ಲಿ ಈ ಚಿತ್ರ ೨೩ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತ್ತು. ಹೆಚ್ಚಾಗಿ ಮಲ್ಟಿಪ್ಲೆಕ್ಸ್ ಗಳಲ್ಲೇ ಈ ಚಿತ್ರ ತೆರೆಗಂಡಿತ್ತು. ಅಲ್ಲೆಲ್ಲ ದಾಖಲೆ ಮಟ್ಟದಲ್ಲಿ ಬ್ಯಾಕ್ ಬೆಂಚರ್ಸ್ ಚಿತ್ರ ಪ್ರದರ್ಶನ ಕಂಡಿದೆ. ಬ್ಯಾಕ್ ಬೆಂಚರ್ಸ್‍ಗೆ ಆರಂಭದಿಂದ ಸಿಗುತ್ತಿರುವ ಪ್ರತಿಕ್ರಿಯೆ, ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂದಣಿ ಹೆಚ್ಚಾಗುತ್ತಿರುವ ರೀತಿ ಕಂಡು ವಿತರಕರಿಗೆ ಸಂತೋಷವಾಗಿದೆ. ಅಂಥಾದ್ದೊಂದು ಸಮ್ಮೋಹಕ ಚೇತರಿಕೆ ಬ್ಯಾಕ್ ಬೆಂಚರ್ಸ್ ಕಡೆಯಿಂದ ಕಂಡು ಬರುತ್ತಿದೆ.
ಇನ್ನುಳಿದಂತೆ, ರಾಯಚೂರು, ಧಾರವಾಡ, ಶಿವಮೊಗ್ಗ, ಹುಬ್ಬಳ್ಳಿ ಮುಂತಾದೆಡೆಗಳಲ್ಲಿಯೂ ಬ್ಯಾಕ್ ಬೆಂಚರ್ಸ್ ಅಕ್ಷರಶಃ ಕಮಾಲ್ ಮಾಡಿದ್ದಾರೆ. ಈ ಭಾಗಗಳಲ್ಲಿ ಹೊಸಬರ ಚಿತ್ರಗಳು ಅದೇನೇ ಪ್ರಯತ್ನ ಪಟ್ಟರೂ ಓಪನಿಂಗ್ ಪಡೆದುಕೊಳ್ಳುತ್ತಿರಲಿಲ್ಲ. ಇಂಥಾ ವಾತಾವರಣದಲ್ಲಿ ಬ್ಯಾಕ್ ಬೆಂಚರ್ಸ್ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ದಿನ ಕಳೆದಂತೆ ಶೋಗಳು ತುಂಬಿಕೊಳ್ಳುತ್ತಿವೆ. ಮೈಸೂರಿನಲ್ಲಿ ಮುದಲ ದಿನ ಒಂದು ಶೋ ಅಷ್ಟೇ ಆಯೋಜಿಸಲಾಗಿತ್ತು. ಎರಡು ಮೂರು ದಿನ ಕಳೆಯುವಷ್ಟರಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಬಿಟ್ಟಿದೆ. ಗುರುವಾರದಂದು ಆರು ಶೋಗನ್ನು ನಿಗಧಿಪಡಿಸಲಾಗಿದೆ. ಇದು ನಿಜಕ್ಕೂ ಕನ್ನಡ ಚಿತ್ರರಂಗದ ದೃಷ್ಟಿಯಿಂದಲೂ ಸಕಾರಾತ್ಮಕ ಬೆಳವಣಿಗೆ.
ಕಾಲೇಜು ಕೇಂದ್ರಿತ ಕಥೆಗಳು ಕನ್ನಡದಲ್ಲಿ ಹಿಟ್ ಆಗಿವೆ. ನಿರ್ದೇಶಕ ರಾಜಶೇಖರ್ ಕಾಲೇಜು ಬೇಸಿನ ಈ ಕಥೆಯನ್ನು ಕಟ್ಟಿ ಕೊಟ್ಟಿರುವ ರೀತಿ, ಹೊಸಬರ ತಂಡ ಅದರಲ್ಲಿ ತಲ್ಲೀನವಾದ ಪರಿಗಳೆಲ್ಲವೂ ಪ್ರೇಕ್ಷಕರನ್ನು ಸೆಳೆದಿವೆ. ಒಂದು ಶೋಗೆ ಒಬ್ಬರು ಬಂದರೆ, ಮತ್ತೊಂದು ಶೋಗೆ ಹತ್ತದಿನೈದು ಮಂದಿಯ ಸಮೇತ ಬರಲಾರಂಭಿಸಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡ ಸಿನಿಮಾಗಳಿಗೆ ಹೇಳಿಕೊಳ್ಳುವಂಥಹ ಪ್ರತಿಕ್ರಿಯೆ ಸಿಗುತ್ತಿಲ್ಲ. ಅಂಥಹುದರಲ್ಲಿ ಬ್ಯಾಕ್ ಬೆಂಚರ್ಸ್ ಭಾರೀ ಸಂಚಲನ ಸೃಷ್ಟಿಸುತ್ತದೆ.
ಪಿ.ಪಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ರಮ್ಯಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.