ಶಿವಣ್ಣ ಅಭಿನಯದ “ಘೋಸ್ಟ್” . ಸಿನಿಪ್ರಿಯರಿಗೆ ಮನೋರಂಜನೆಯ ಭರ್ಜರಿ ರಸದೌತಣ .
ಕರುನಾಡ ಚಕ್ರವರ್ತಿ’ ಶಿವರಾಜ್‌ಕುಮಾರ್ ಅಭಿನಯದ ‘ಘೋಸ್ಟ್’ ಸಿನಿಮಾ ಘೋಷಣೆಯಾದಾಗಿನಿಂದ ಸಾಕಷ್ಟು ಕುತೂಹಲ, ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆ ಎಲ್ಲಾ ಕುತೂಹಲ ಮತ್ತು ನಿರೀಕ್ಷೆಗಳು ಹುಸಿಯಾಗದಂತೆ ನಿರ್ದೇಶಕ ಶ್ರೀನಿ ನೋಡಿಕೊಂಡಿದ್ದಾರೆ.
‘ಘೋಸ್ಟ್’ ಚಿತ್ರವು ಜೈಲ್‍ವೊಂದರಲ್ಲಿ ನಡೆಯುವ ಕಥೆ ಎಂದು ಶ್ರೀನಿ ಹೇಳಿಕೊಂಡಿದ್ದರು. ಈ ಚಿತ್ರವು ಬರೀ ಜೈಲ್‍ನಲ್ಲಿ ನಡೆಯುವ ಕಥೆಯಷ್ಟೇ ಅಲ್ಲ, ಸೆಂಟ್ರಲ್ ಜೈಲ್‍ನ್ನು ಹೈಜಾಕ್ ಮಾಡುವ ಕಥೆ. ಯಾಕೆ? ಹೇಗೆ? ಮುಂದೆ ಏನೆಲ್ಲಾ ಆಗುತ್ತದೆ? ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಅದೇ ರೀತಿ, ಡೀಏಜಿಂಗ್ ತಂತ್ರಜ್ಞಾನದ ಮೂಲಕ ಶಿವರಾಜ
ಕುಮಾರ್ ಬಹಳ ಯಂಗ್ ಆಗಿ ಏಕೆ ಕಾಣಿಸಿಕೊಳ್ಳುತ್ತಾರೆ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು.
ಈ ತರಹದ ಹೈಜಾಕ್ ಕಥೆ ಕನ್ನಡದಲ್ಲಿ ಇತ್ತೀಚೆಗೆ ಬಂದಿರಲಿಲ್ಲ. ಅದರಲ್ಲೂ ಜೈಲ್ ಹೈಜಾಕ್ ಮಾಡುವುದು ಕನ್ನಡದ ಮಟ್ಟಿಗೆ ಫ್ರೆಶ್ ಕಥೆ. ಇಂಥದ್ದೊಂದು ವಿಭಿನ್ನ ಕಲ್ಪನೆಯ ಜೊತೆಗೆ ಶಿವರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ಇಷ್ಟಾಗುವ ಅಂಶಗಳನ್ನು ಬ್ಲೆಂಡ್ ಮಾಡಿದ್ದಾರೆ ನಿರ್ದೇಶಕ ಶ್ರೀನಿ. ಎರಡು ದಿನಗಳಲ್ಲಿ ನಡೆಯುವ ಒಂದು ಕಥೆಯನ್ನು ಅವರು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಹೇಳಿದ್ದಾರೆ. ಫ್ಲಾಶ್‍ಬ್ಯಾಕ್, ನಾನ್-ಲೀನಿಯರ್ ಸ್ಕ್ರೀನ್‍ಪ್ಲೇ ಮತ್ತು ಹಲವು ಟ್ವಿಸ್ಟ್ ಗಳ ಮೂಲಕ ಚಿತ್ರವನ್ನು ಇನ್ನಷ್ಟು ರೋಚಕವಾಗಿಸಿದ್ದಾರೆ.
ಇಡೀ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರು ಫುಲ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಇಲ್ಲಿ ಅವರಿಗೆ ಮಾತು ಕಡಿಮೆ. ಕಣ್ಣಲ್ಲೇ ಹೆಚ್ಚು ಮಾತನಾಡುತ್ತಾರೆ. ಇರುವ ಕೆಲವು ಸಂಭಾಷಣೆಗಳು ಸಹ ಗಮನಸೆಳೆಯುತ್ತವೆ. ಮಲಯಾಳಂ ನಟ ಜಯರಾಮ್ ಅವರು ಪೊಲೀಸ್ ಅಧಿಕಾರಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ‘ಕೆಜಿಎಫ್’ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಹಾಡುಗಳಿಗೆ ಜಾಗವಿಲ್ಲದೇ ಇದ್ದರೂ, ಅರ್ಜುನ್ ಜನ್ಯ ಹಿನ್ನೆಲೆ ಸಂಗೀತದ ಮೂಲಕ ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಾರೆ. ಈ ಚಿತ್ರವನ್ನು ಜನ್ಯ ತಮ್ಮ ಸಂಗೀತದಿಂದ ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹೊಸತನದಿಂದ ಕೂಡಿದೆ. ನಿರ್ಮಾಪಕ ಸಂದೇಶ್, ಚಿತ್ರಕ್ಕೆ ಬೇಕಾಗಿದ್ದೆಲ್ಲವನ್ನೂ ಕೊಟ್ಟು ಚಿತ್ರ ಅದ್ಭುತವಾಗಿ ಮೂಡಿಬರುವುದಕ್ಕೆ ಕಾರಣರಾಗಿದ್ದಾರೆ.
Ghost super movie