.ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದ ಬಿಡುಗಡೆಯಾಗಲಿದೆ “ಗರಡಿ” ಚಿತ್ರದ ಟ್ರೇಲರ್ . ನವೆಂಬರ್ 1 ರಂದು ನಡೆಯಲಿರುವ ವರ್ಣರಂಜಿತ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಣಿಬೆನ್ನೂರು .
ಬಿ.ಸಿ.ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ “ಗರಡಿ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಸಂಜೆ 6.30ಕ್ಕೆ ರಾಣಿಬೆನ್ನೂರಿನ ಮುನ್ಸಿಪಲ್ ಗ್ರೌಂಡ್ ನಲ್ಲಿ ನಡೆಯಲಿದೆ. ಈಗಾಗಲೇ ಸಮಾರಂಭಕ್ಕೆ ಅದ್ದೂರಿ ತಯಾರಿ ನಡೆಯುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ದರ್ಶನ್ ಅವರು ಈ ಚಿತ್ರದ ಪ್ರಮುಖಪಾತ್ರದಲ್ಲೂ ನಟಿಸಿದ್ದಾರೆ. ಇತ್ತೀಚಿಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಅರ್ಹತಾಪತ್ರ ನೀಡಿದೆ. “ಗರಡಿ” ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿರಂಜನ್ ಬಾಬು ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಅವರ ಸಂಕಲನವಿರುವ “ಗರಡಿ” ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸೃಷ್ಟಿ ಪಾಟೀಲ್.
ಸೂರ್ಯ ನಾಯಕರಾಗಿ ನಟಿಸಿದ್ದಾರೆ. ಬಿ.ಸಿ.ಪಾಟೀಲ್, ಸೋನಾಲ್ ಮೊಂತೆರೊ, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರ್, ರಾಘವೇಂದ್ರ, ಚೆಲುವರಾಜ್, ಬಲ ರಾಜವಾಡಿ, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು “ಗರಡಿ” ಚಿತ್ರದ ತಾರಾಬಳಗದಲ್ಲಿದ್ದಾರೆ. ನಿಶ್ವಿಕಾ ನಾಯ್ಡು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.