ಟೀಸರ್ ನಲ್ಲೇ ಮೋಡಿ ಮಾಡಿದ “ಫಸ್ಟ್ ನೈಟ್ ವಿತ್ ದೆವ್ವ “. ಇದು ಪ್ರಥಮ್ ಅಭಿನಯದ ಚಿತ್ರ .
“ಬಿಗ್ ಬಾಸ್” ಮೂಲಕ ಜನಪ್ರಿಯರಾದ ನಟ ಪ್ರಥಮ್ ನಾಯಕನಾಗಿ ಅಭಿನಯಿಸಿರುವ, ನವೀನ್ ಬೀರಪ್ಪ ನಿರ್ಮಾಣದ ಹಾಗೂ ಪಿ.ವಿ.ಆರ್ ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನದ “ಫಸ್ಟ್ ನೈಟ್ ವಿತ್ ದೆವ್ವ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇತ್ತೀಚಿಗೆ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ “ಬಿಗ್ ಬಾಸ್” ಸ್ಪರ್ಧಿಗಳಾದ “ತುಕಾಲಿ” ಸಂತೋಷ್ ಹಾಗೂ ನಮೃತ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ನಿರ್ದೇಶಕರ ನಟ ಎಂದು ಮಾತನಾಡಿದ ಪ್ರಥಮ್, ಪಿ.ವಿ.ಆರ್ ಸ್ವಾಮಿ ಅವರು ಬಹುಬೇಗನೇ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಕಳೆದ ನವೆಂಬರ್ ನಲ್ಲಿ ಈ ಚಿತ್ರ ಆರಂಭವಾಗಿತ್ತು. ಚಿತ್ರ ಆರಂಭವಾದ ತಕ್ಷಣ ಮೊದಲು ಬರುವ ಸನ್ನಿವೇಶವೇ ಮದುವೆ ದೃಶ್ಯ. ಮದುವೆಯನ್ನು ಬಹಳ ಆಸೆಯಿಂದ ಆದ ಹುಡುಗನಿಗೆ ತನ್ನ ಮೊದಲರಾತ್ರಿ ನಡೆಯುತ್ತಿರುವುದು ದೆವ್ವದ ಜೊತೆಗೆ ಎಂದು ತಿಳಿದಾಗ ಏನೆಲ್ಲಾ ಆಗುತ್ತದೆ? ಎಂಬುದೆ ಚಿತ್ರದ ಕಥಾಸಾರಾಂಶ. ಈ ಚಿತ್ರದಲ್ಲಿ ನಗುವಿಗೆ ಬರವಿಲ್ಲ. ಹಾರಾರ್, ಕಾಮಿಡಿ, ಆಕ್ಷಮ್ ಹಾಗೂ ಸೆಂಟಿಮೆಂಟ್ ಗಳ ಸಮ್ಮಿಲ್ಲನವೇ ಈ ನಮ್ಮ ಚಿತ್ರ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ನಿಖಿತ, ಜೀವಿತ ಹಾಗೂ ಸುಶ್ಮಿತ ಮೂವರು ನಾಯಕಿಯರು. ನಿಖಿತ ನನ್ನ ಹೆಂಡತಿ ಪಾತ್ರ ಮಾಡಿದ್ದಾರೆ. ಹಿರಿಯ ನಟರಾದ ಶ್ರೀನಿವಾಸಮೂರ್ತಿ, ರಮೇಶ್ ಭಟ್, ಹರೀಶ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಮಾರಂಭಕ್ಕೆ ಬಂದಿರುವ ತುಕಾಲಿ ಸಂತೋಷ್ ಹಾಗೂ ನಮೃತಾ ಅವರಿಗೆ ಧನ್ಯವಾದ ಎಂದರು.
ನವೆಂಬರ್ ನಲ್ಲಿ ಆರಂಭವಾದ ಈ ಚಿತ್ರ, ನನ್ನ ತಂಡದ ಸಹಕಾರದಿಂದ ನಿಗದಿಯಂತೆ ಪೂರ್ಣವಾಗಿದೆ. ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಸಿದ್ದತೆ ನಡೆಯತ್ತಿದೆ ಎಂದು ನಿರ್ದೇಶಕ ಹಾಗೂ ಛಾಯಾಗ್ರಾಹಕ ಪಿವಿಆರ್ ಸ್ವಾಮಿ ತಿಳಿಸಿದರು.
ನಿರ್ಮಾಪಕ ನವೀನ್ ಬೀರಪ್ಪ, ನಾಯಕಿರಾದ ನಿಖಿತ, ಸುಶ್ಮಿತ, ಜೀವಿತ, ನಟಿ ಪುಷ್ಪ ಸ್ವಾಮಿ, ನಟ ಹರೀಶ್ ರಾಜ್, ಸಂಗೀತ ನಿರ್ದೇಶಕ ಅದ್ವಿಕ್ ವರ್ಮ, ಕಾರ್ಯಕಾರಿ ನಿರ್ಮಾಪಕ ಅರವಿಂದ್ ಹಾಗೂ ಸಂಭಾಷಣೆ ಬರೆದು ಸಂಕಲನ ಕಾರ್ಯವನ್ನು ಮಾಡುತ್ತಿರುವ ನಾಗೇಶ್ ಚಿತ್ರದ ಕುರಿತು ಮಾತನಾಡಿದರು.