ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ.
ಹಲವು ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ ಚಿತ್ರ “UI”. ಬಹು ನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಬಹುದೆಂಬ ಕಾತುರ ಅಭಿಮಾನಿಗಳಿಗಿತ್ತು. ಈಗ “UI” ಚಿತ್ರ ಡಿಸೆಂಬರ್ 20 ರಂದು ವಿಶ್ವದಾದ್ಯಂತ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂಬ ವಿಷಯವನ್ನು ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಿಳಿಸಿದೆ. ಪೋಸ್ಟರ್ ನಲ್ಲಿ “ಇಷ್ಟು ದಿನ ಸಿನಿಮಾ ನೋಡಿ ನೀವು ಹಿಟ್, ಫ್ಲಾಪ್ ಅಂತ ಹೇಳ್ತಿದ್ರೀ. ಈ ಸಿನಿಮಾ ನಿಮ್ಮನ್ ನೋಡಿ” ಎಂಬ ವಾಕ್ಯವಿದ್ದು, ಇದರಿಂದ ಚಿತ್ರದ ಬಗ್ಗೆ ಅಭಿಮಾನಿಗಳಿಗಿರುವ ಕುತೂಹಲ ಮತ್ತಷ್ಟು ಹೆಚ್ಚಿದೆ.
ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನವೀನ್ ಮನೋಹರ್ ಅವರ ಸಹ ನಿರ್ಮಾಣ ಹಾಗೂ ತುಳಸಿರಾಮ ನಾಯ್ಡು(ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.