ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ನಿರ್ಮಾಣದ “ಚಿ ಸೌಜನ್ಯ” ಚಿತ್ರದ ಮೂಲಕ ನಿರ್ದೇಶನದತ್ತ ಖ್ಯಾತ ನಟಿ ಹರ್ಷಿಕಾ ಪೂಣಚ್ಛ .

ಶೋಷಿತ ಹೆಣ್ಣುಮಕ್ಕಳ ಕುರಿತಾದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ .

ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಅಷ್ಟೇ ಅಲ್ಲದೆ ಉತ್ತಮ ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿರುವ ನಟಿ ಹರ್ಷಿಕಾ ಪೂಣಚ್ಛ ಈಗ ನಿರ್ದೇಶಕಿಯಾಗುತ್ತಿದ್ದಾರೆ. ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರವಿರುವ ನಿರ್ದೇಶಕಿಯರ ಸಾಲಿಗೆ ಹರ್ಷಿಕಾ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ, ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚೆಗೆ ನಡೆಯಿತು. ದೇಶದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಹೆಣ್ಣುಮಕ್ಕಳ ಶೋಷಣೆ ಕುರಿತು ಜಾಗೃತಿ ಮೂಡಿಸುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ “ಚಿ.ಸೌಜನ್ಯ” ಎಂದು ಹೆಸರಿಡಲಾಗಿದೆ. “ಒಂದು ಹೆಣ್ಣಿನ ಕಥೆ” ಎಂಬ ಅಡಿಬರಹ ಈ ಚಿತ್ರಕ್ಕಿದೆ. ಶೀರ್ಷಿಕೆ ಅನಾವರಣದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಭಾರತದಲ್ಲಿ ಪ್ರತಿವರ್ಷ ಮೂವತ್ತಾರು ಸಾವಿರಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಸರಾಸರಿ ದಿನಕ್ಕೆ ನೂರು ಮಹಿಳೆಯರಂತೆ. ಈ ಅತ್ಯಾಚಾರಗಳ ಬಗ್ಗೆ ಕೇಸ್ ದಾಖಲಾಗುತ್ತದೆ. ವಿಚಾರಣೆ ನಡೆಯುತ್ತದೆ. ಆದರೆ ಆ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿರುವುದು ತೀರ ಕಡಿಮೆ. ನಾನು ಹಾಗೂ ಹರ್ಷಿಕಾ ಅವರು ಕೂಡ ಇಂತಹ ಘಟನೆ ಬಗ್ಗೆ ನಮಗೆ ತಿಳಿದಾಗ ಅ ಸ್ಥಳಕ್ಕೆ ಹೋಗಿ ಸಾವಿರಾರು ಜನರೊಂದಿಗೆ ಹೋರಾಟ ಮಾಡಿದ್ದೇವೆ. ಈ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಸಿನಿಮಾ ಉತ್ತಮವಾದ ಮಾಧ್ಯಮ ಅನಿಸಿತು. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇವೆ. ಸಮಾಜಕ್ಕೆ ಉತ್ತಮ ಸಂದೇಶವಿರುವ ಈ ಚಿತ್ರವನ್ನು ನಾನು ಹಾಗೂ ಮಧು‌ ಮರಿಸ್ವಾಮಿ ಅವರು ಜಂಟಿಯಾಗಿ ನಿರ್ಮಿಸುತ್ತಿದ್ದೇವೆ. ಈ ಕಥೆಯನ್ನು ಕಿಶೋರ್ ಅವರ ಬಳಿ ಹೇಳಿದಾಗ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು ಎಂದು ಭುವನ್ ಪೊನ್ನಣ್ಣ ತಿಳಿಸಿದರು.

ಇದು ನಮ್ಮ ಸಂಸ್ಥೆಯ ನಿರ್ಮಾಣದ ಎರಡನೇ ಚಿತ್ರ. ಭುವನ್ ಎಂಟರ್ಟೈನ್ಮೆಂಟ್ ಸಹ ನಿರ್ಮಾಣಕ್ಕೆ ನಮ್ಮ ಸಂಸ್ಥೆಯ ಜೊತೆಯಾಗಿದೆ. ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಕಿಶೋರ್, ಉಗ್ರಂ ಮಂಜು, ಕಾಕ್ರೋಜ್ ಸುಧೀ , ಯಶ್ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಅರುಣ್ ಸುರೇಶ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ ಎಂದರು ನಿರ್ಮಾಪಕ ಮಧು ಮರಿಸ್ವಾಮಿ.

ಇಷ್ಟು ದಿನ ನಟಿಯಾಗಿ ಗುರುತಿಸಿಕೊಂಡಿದ್ದೆ. ಚಿತ್ರವನ್ನು ನಿರ್ಮಾಣ‌ ಮಾಡಬೇಕು ಎಂಬ ಹಂಬಲವಿತ್ತು. ಆದರೆ ನಿರ್ದೇಶನ ಮಾಡುತ್ತೀನಿ ಅಂತ ಅಂದುಕೊಂಡಿರಲಿಲ್ಲ ಎಂದು ಮಾತನಾಡಿದ ಹರ್ಷಿಕಾ ಪೂಣಚ್ಛ, ಹೆಣ್ಣುಮಕ್ಕಳ ಶೋಷಣೆಯ ಬಗ್ಗೆ ನಾನು ಹಾಗೂ ಭುವನ್ ಸಾಕಷ್ಟು ಹೋರಾಟ ಮಾಡಿದ್ದೇವೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರವನ್ನು ಮಾಡಬೇಕೆಂದು ಆಸೆಯಿತ್ತು. ಹಾಗಾಗಿ ನನ್ನ ಪತಿ ಭುವನ್ ಮತ್ತು ನಿರ್ಮಾಪಕ ಮಧು ಮರಿಸ್ವಾಮಿ ಅವರು ಹೆಣ್ಣುಮಕ್ಕಳ ನೋವು ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳಿಗೆ ಜಾಸ್ತಿ ಗೊತ್ತಿರುತ್ತದೆ. ಹಾಗಾಗಿ ಈ ಚಿತ್ರವನ್ನು ನೀವೇ ನಿರ್ದೇಶನ ಮಾಡಿ ಎಂದರು. ಇದು ಯಾವುದೇ ಒಂದು ಘಟನೆಯ ಕುರಿತಾದ ಚಿತ್ರವಲ್ಲ. ದೇಶದಲ್ಲಿ ನಡೆದಿರುವ ಇಂತಹ ಅಮಾನುಷ ಘಟನೆಗಳನ್ನಿಟ್ಟುಕೊಂಡು ಮಾಡುತ್ತಿರುವ ಚಿತ್ರ. ನಮ್ಮ ಚಿತ್ರದ ನಾಯಕಿ ಹೆಸರು ಸೌಜನ್ಯ ಅಷ್ಟೇ. ಇನ್ನೂ ಈ ಚಿತ್ರದ ಕಥೆ ಮಾಡಿಕೊಂಡ ತಕ್ಷಣ ಪ್ರಮುಖಪಾತ್ರಕ್ಕೆ ನಮಗೆ ತಕ್ಷಣ ಅನಿಸಿದು ಕಿಶೋರ್ ಅವರು. ಕಥೆ ಕೇಳಿದ ತಕ್ಷಣ ನಟಿಸಲು ಕಿಶೋರ್ ಅವರು ಒಪ್ಪಿಕೊಂಡರು. ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಮಾತ್ರ ಬಿಡುಗಡೆ ಮಾಡಿದ್ದೇವೆ. ಚಿತ್ರೀಕರಣ ಆರಂಭವಾಗಲು ಇನ್ನೆರಡು ತಿಂಗಳು ಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ. ನನ್ನ ಮೊದಲ ನಿರ್ದೇಶನದ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು‌.

ನಾವು ದೇಶದಲ್ಲಿ ಇಂತಹ ಎಷ್ಟೇ ಘಟನೆಗಳು ನಡೆದರೂ ನಮ್ಮ ಮನೆಯದಲ್ಲ ಎನ್ನುವ ರೀತಿಯಲ್ಲಿ ಇರುತ್ತೇವೆ. ಆದರೆ ಆಕೆ ಕೂಡ ಒಬ್ಬರ ಮಗಳು, ಒಬ್ಬರ ಸಹೋದರಿ ಆಗಿರುತ್ತಾರೆ. ಆ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಇನ್ನೂ ಇಂತಹ ವಿಷಯಗಳನ್ನು ಸಿನಿಮಾ ಮೂಲಕ ಹೇಳಿದಾಗ ಅದು ಬೇಗ ಜನರಿಗೆ ತಲಪುತ್ತದೆ. ಇಂತಹ ವಿಷಯವನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರಿಗೆ ಹಾಗೂ ಮೊದಲ ಬಾರಿಯ ನಿರ್ದೇಶನಕ್ಕೆ ಸಾಮಾಜಿಕ ಕಳಕಳಿಯುಳ್ಳ ಕಥಾವಸ್ತು ಆರಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ನಟ ಕಿಶೋರ್ ತಿಳಿಸಿದರು.

ನಿರ್ಮಾಪಕ ಮಧು ಅವರು ಕರೆ ಮಾಡಿ ಈ ಚಿತ್ರದಲ್ಲಿ ನಟಿಸಬೇಕೆಂದು ಹೇಳಿದರು. ಇಂತಹ ಸಾಮಾಜಿಕ ಕಳಕಳಿಯುಳ್ಳ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಹೆಮ್ಮೆಯಿದೆ ಎಂದರು ನಟರಾದ‌ ಉಗ್ರಂ ಮಂಜು ಹಾಗೂ ಕಾಕ್ರೋಜ್ ಸುಧೀ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments