ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ನಾಮ ನಿರ್ದೇಶನ:ದರ್ಶನ್, ರಕ್ಷಿತ್ ಚಿತ್ರಗಳಿಗೆ ಸಿಂಹಪಾಲುಕಾಟೇರ ಚಿತ್ರ 15, ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೆ 13.

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು ದರ್ಶನ್ ನಟನೆಯ ಕಾಟೇರ ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ಕಾಟೇರ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ಸಪ್ತಸಾಗರದಾಚೆ ಎಲ್ಲೋ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ.
ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನೂ ಒಬ್ಬ ಪತ್ರಕರ್ತನಾಗಿ ಅಕಾಡಮಿ ಮತ್ತು ವಿಮರ್ಶಕರ ಪ್ರಶಸ್ತಿಗಳು ನಿಷ್ಪಕ್ಷಪಾತವಾಗಿ ಮತ್ತು ವಿಶ್ವಾಸ ಮೂಡಿಸುವಂತಹ ಆಯ್ಕೆಗಳು ಆಗಿವೆ. ಈ ಕುರಿತು ನನಗೆ ಹೆಮ್ಮೆ ಅನಿಸುತ್ತದೆ. ಕನ್ನಡದ ಅತ್ಯುತ್ತಮ ಮನರಂಜನೆಯನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲ್ಯಾಘಿಸಿದರು.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ, ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದರು ನಟಿ ಅಮೂಲ್ಯ.

ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜೊತೆ ಪ್ರಶಸ್ತಿ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದ್ದು ಗೊತ್ತೇ ಇದೆ. ಈ ಬಾರಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಜೊತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ನಮ್ಮ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಮಾತನಾಡಿದ್ದಾರೆ.
ಅಂಗಾಂಗ ದಾನ ಅಭಿಯಾನಕ್ಕೆ ಅಕಾಡಮಿ ಜೊತೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್, ‘ಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆ ಎಂದರು.
ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆ ಎಂದರು.
ಪ್ರತಿ ವರ್ಷದಂತೆ ಈ ಬಾರಿಯೂ ಅಚ್ಚರಿ ಹೆಸರುಗಳು ನಾಮ ನಿರ್ದೇಶನ ಪಟ್ಟಿಯಲ್ಲಿದ್ದು, ಜನವರಿ 28 ರವಿವಾರದಂದು ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments