ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ; ಸೆ. 29ರ ಸಂಜೆ 6ಗಂಟೆಗೆ ಗ್ರ್ಯಾಂಡ್ ಓಪನಿಂಗ್. ಕಿಚ್ಚ ಸುದೀಪ್ ಶೋನ ಸೂತ್ರಧಾರ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿರುವ ಬಿಗ್ ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕಳೆದ ಸೀಸನ್ 10ರ ಬಹುದೊಡ್ಡ ಯಶಸ್ಸಿನ ಬಳಿಕ ದೊಡ್ಡ ಜವಾಬ್ದಾರಿಯೊಂದಿಗೆ ಕಲರ್ಸ್ ಕನ್ನಡ ಮತ್ತೊಂದು ಸೀಸನ್ ಜತೆಗೆ ಆಗಮಿಸುತ್ತಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ಗಮನ ಸೆಳೆದಿರುವ ಸೀಸನ್ 11, ಇನ್ನೇನು ಶೀಘ್ರದಲ್ಲಿಯೇ ಆರಂಭವಾಗಲಿದೆ. ಈ ಸಲದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್, ಅಲೋಕ್ ಜೈನ್ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್, ವಯಾಕಾಮ್ 18, ದೀಪಕ್ ಧಾರ್ ಸಂಸ್ಥಾಪಕರು ಮತ್ತು ಗ್ರೂಪ್ ಸಿಇಓ ಬಾನಿಜೆ ಏಷ್ಯಾ ಮಾತ್ತು ಎಂಡೆಮೋಲ್ ಶೈನ್ ಇಂಡಿಯಾ ಹಾಗೂ ಕಲರ್ಸ್ ಕನ್ನಡ ಹೆಡ್ ಪ್ರಶಾಂತ್ ನಾಯಕ್, ಉಪಸ್ಥಿತರಿದ್ದರು. ಸುದ್ದಿಗೋಷ್ಠಿಗೂ ಮೊದಲು ಈ ಸಲದ ಹ್ಯಾಷ್‌ಟ್ಯಾಗ್‌ಗಳಾದ #BBK11 #BiggBossKannada11 #ColorsKannada #HosaAdhyaya ಅನಾವರಣ ಮಾಡಲಾಯಿತು.
ಕಲರ್ಸ್ ಕನ್ನಡದ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ, ಬಿಗ್ ಬಾಸ್ ಎಂಬುದು ಒಂದು ತಂಡದ ಪರಿಶ್ರಮ. ಈ ವರ್ಷ ಚೆನ್ನಾಗಾಯಿತು, ಕಳೆದ ವರ್ಷ ಚೆನ್ನಾಗಾಯಿತು ಅಂತಲ್ಲ. ಪ್ರತಿ ವರ್ಷವೂ ತಂಡದ ಶ್ರಮ ಅಷ್ಟೇ ಪ್ರಮಾಣದಲ್ಲಿರುತ್ತದೆ. ಪ್ರತಿ ವರ್ಷವೂ ಹಾರ್ಟ್ ಅಂಡ್ ಸೋಲ್ ಶ್ರಮ ಹಾಕುತ್ತಿದ್ದೇವೆ. ಅದರಲ್ಲೂ ಕಳೆದ ವರ್ಷದ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕೂಡಲೇ, ಅದರ ಭಾರ ಸಹಜವಾಗಿ ನಮಗೆ ಗೊತ್ತಿದ್ದೋ, ಗೊತ್ತಿಲದೆಯೋ ನಮ್ಮ ಮೇಲೆ ಬಂದು ಬಿದ್ದಿರುತ್ತದೆ. ಈ ಸಲ ಅದಕ್ಕಿಂತ ಜಾಸ್ತಿ ಇದೆ. ಅದನ್ನು ಫುಲ್ ಫಿಲ್ ಮಾಡೋಕೆ ನಮ್ಮ ತಂಡ ಅದೇ ನಿಟ್ಟಿನಲ್ಲಿ ಕೆಲಸ ಮಾಡಲಿದೆ” ಎಂದಿದ್ದಾರೆ.
ಕಿಚ್ಚ ಸುದೀಪ್ ಶೋನ ಸೂತ್ರಧಾರ
ಸುದೀಪ್ ಸರ್ ಬಗ್ಗೆ ಹೇಳಲೇಬೇಕು. ಒಂದು ಶೋವನ್ನು ನಾವು ಡಿಸೈನ್ ಮಾಡಬಹುದು. ಅದನ್ನು ಒಂದು ತಂಡವಾಗಿ ನಿರ್ವಹಿಸಬಹುದು. ಆದರೆ, ಅದನ್ನು ಮುನ್ನಡೆಸುವುದು ನಮ್ಮ ಸುದೀಪ್ ಸರ್. ಈ ಶೋನ ಸೂತ್ರಧಾರ ಅವರು ಎಂದರು ಪ್ರಶಾಂತ್ ನಾಯಕ್.
ಶನಿವಾರವೇ ಸ್ಪರ್ಧಿಗಳ ಹೆಸರು ರಿವೀಲ್
ಸ್ವರ್ಗ ಮತ್ತು ನರಕ ಎಂಬ ಹೊಸ ಕಾನ್ಸೆಪ್ಟ್ ಮೂಲಕ ಈ ಸಲದ ಬಿಗ್ ಬಾಸ್ ಆಗಮಿಸುತ್ತಿದೆ. ಎಲ್ಲರನ್ನು ರಂಜಿಸಲು ಹೆಲ್ ಹೆವೆನ್ ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದೇವೆ. ಇದರ ಜತೆಗೆ ಭಾನುವಾರ ಶೋ ಲಾಂಚ್ ಇರುತ್ತೆ. ಆದರೆ, ಅದಕ್ಕೂ ಮೊದಲೇ ಶನಿವಾರ “ರಾಜಾರಾಣಿ” ರಿಯಾಲಿಟಿ ಶೋನ ಫಿನಾಲೆಯಲ್ಲಿ ಬಿಗ್‌ಬಾಸ್ ಸೀಸನ್ 11ರ ಆಯ್ದ ಕೆಲವರನ್ನು ವೀಕ್ಷಕರಿಗೆ ಪರಿಚಯಿಸಲಿದ್ದೇವೆ. ಹಾಗೆ ರಿವೀಲ್ ಮಾಡಿದ ಹೆಸರುಗಳಲ್ಲಿ, ಯಾರು ಬಿಗ್‌ಬಾಸ್ ಮನೆ ಪ್ರವೇಶಿಸಬೇಕು, ಯಾರು ಬೇಡ ಎಂಬುದನ್ನು ವೀಕ್ಷಕರೇ ವೋಟಿಂಗ್ ಮೂಲಕ ನಿರ್ಧರಿಸುವ ಅವಕಾಶ ನೀಡಲಿದ್ದೇವೆ. ಅಲ್ಲಿ ಪಾಸ್ ಆದವರು, ಮಾರನೇ ದಿನದ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಎಂಟ್ರಿಯಾಗಲಿದ್ದಾರೆ.
ಹೊಸ ನಿರೂಪಕರು ಬರಲಿ ಎಂದು ನಾನೇ ಹೇಳಿದ್ದೆ.
ಬಿಗ್ ಬಾಸ್ ಹೊಸ ಅಧ್ಯಾಯಕ್ಕೆ ಸಜ್ಜಾಗಿದೆ. ಈ ಬಾರಿಯ ಸೀಸನ್ 11 ಕೂಡ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿರುವುದು ಅಧಿಕೃತವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈ ಸಲ ಸುದೀಪ್ ನಿರೂಪಣೆ ಮಾಡಲ್ಲ ಎಂಬ ಸುದ್ದಿ ಇತ್ತು. ಆದರೆ, ಅದೆಲ್ಲದಕ್ಕೂ ಫುಲ್ ಸ್ಟಾಪ್ ಇಟ್ಟಿದೆ ವಾಹಿನಿ. ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ಹತ್ತು ವರ್ಷಗಳಿಂದ ನಾನೇ ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಈ ಬಾರಿ ನಾನು ಬೇಡ ಅಂದದ್ದು ನಿಜ. ಆದರೆ ಇದು ಗಿಮಿಕ್ ಅಲ್ಲ. ನಾನು ಈ ಬಾರಿ ನಿರೂಪಣೆ ಮಾಡದಿರಲು ಕೆಲವು ಕಾರಣಗಳನ್ನು ವಾಹಿನಿಯವರಿಗೆ ಹೇಳಿದ್ದೆ. ಇದರಲ್ಲಿ ಸಂಭಾವನೆ ವಿಷಯವಾಗಲಿ, ಮನಸ್ತಾಪವಾಗಲಿ ಯಾವುದು ಇಲ್ಲ. ಆದರೆ ಅವರು ನನ್ನನ್ನು ಒಪ್ಪಿಸಲು ಯಶಸ್ವಿಯಾದರು. ಸ್ವರ್ಗ – ನರಕ ಹೊಸ ಕಾನ್ಸೆಪ್ಟ್ ನೊಂದಿಗೆ ಈ ಸೀಸನ್ ಬರುತ್ತಿದೆ. ಇದೇ ಮೊದಲ ಬಾರಿಗೆ ಶೋ ಆರಂಭದ ಹಿಂದಿನ ದಿನವೇ ಕೆಲವು ಅಭ್ಯರ್ಥಿಗಳು ಯಾರೆಂದು ತಿಳಿಯಲಿದೆ. ಒಟ್ಟಾರೆಯಾಗಿ, ಕಳೆದ ಸೀಸನ್‌ಗಿಂತ ಈ ಸೀಸನ್ ಇನ್ನೂ ವಿಶೇಷವಾಗಿರಲಿದೆ ಎಂದು ಹೇಳಿದರು.