ಟ್ರೇಲರ್ ನಲ್ಲೇ ಎಲ್ಲರ ಗಮನ ಸೆಳೆಯುತ್ತಿದೆ “ಅಥಿ” ಐ ಲವ್ ಯು.
ಇತ್ತೀಚಿಗೆ ಬರುತ್ತಿರುವ ಕನ್ನಡದ ಹೊಸ ಚಿತ್ರಗಳ ಹೊಸ ಪ್ರಯತ್ನವನ್ನು ಪ್ರೇಕ್ಷಕ ಮೆಚ್ಚಿಕೊಳ್ಳುತ್ತಿದ್ದಾನೆ. ಅಂತಹುದೆ ಒಂದು ವಿಭಿನ್ನ ಕಥಾಹಂದರ ಹೊಂದಿರುವ “ಅಥಿ” ಐ ಲವ್ ಯು ಚಿತ್ರ ಟ್ರೇಲರ್ ನಲ್ಲೇ ಎಲ್ಲರ ಗಮನ ಸೆಳೆದಿದೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.
ನನ್ನ ನಿರ್ಮಾಣದ ಎರಡನೇ ಚಿತ್ರವಿದು. ನಿರ್ದೇಶಕ ಲೋಕೇಂದ್ರ ಸೂರ್ಯ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡಿದ್ದೇನೆ. ಸತಿಪತಿಯರ ಸಂಬಂಧದ ಕುರಿತಾದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುತ್ತೇನೆ. ಬಿಡುಗಡೆಯ ಸಮಯದಲ್ಲಿ ನೂತನ ಯೋಜನೆ ಹಾಕಿಕೊಂಡಿದ್ದೇನೆ. ಗಂಡ ಟಿಕೆಟ್ ತೆಗೆದುಕೊಂಡರೆ ಹೆಂಡತಿಗೆ ಟಿಕೆಟ್ ಉಚಿತ ಹಾಗೂ ಹೆಂಡತಿ ಟಿಕೆಟ್ ತೆಗೆದುಕೊಂಡರೆ ಗಂಡನಿಗೆ ಉಚಿತ ಎಂದು ನಿರ್ಮಾಪಕ ರೆಡ್ & ವೈಟ್ ಸೆವೆನ್ ರಾಜ್ ತಿಳಿಸಿದರು.
ಈ ಚಿತ್ರದಲ್ಲಿರುವುದು “ಅಥಿ”ಹಾಗೂ “ವಸಂತ್” ಎಂಬ ಎರಡು ಪಾತ್ರಗಳು ಮಾತ್ರ ಎಂದು ಮಾತು ಆರಂಭಿಸಿದ ಚಿತ್ರದ ನಿರ್ದೇಶಕ ಲೋಕೇಂದ್ರ ಸೂರ್ಯ, ಇದು ಒಂದು ದಿನದಲ್ಲಿ ನಡೆಯುವ ಕಥೆ. ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಗಂಡ ದಿನ ರಾತ್ರಿ ವಾಪಸು ಬರುತ್ತಾನೆ. ಒಂದು ದಿನ ಇದಕ್ಕಿದಂತೆ ಗಂಡ ಮಧ್ಯಾಹ್ನ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಏನು ಮಾಡುತ್ತಿರುತ್ತಾಳೆ? ಎಂಬುದನ್ನು ತೆರೆಯ ಮೇಲೆ ನೋಡಬೇಕು. ನಮ್ಮ ಚಿತ್ರವನ್ನು ಮದುವೆಯಾದ ದಂಪತಿಗಳು ಹಾಗೂ ಪ್ರೀತಿ ಮಾಡುತ್ತಿರುವವರು ನೋಡಿ. ಚಿತ್ರದಲ್ಲಿ ಸಮಾಜಕ್ಕೆ ಒಂದೊಳ್ಳೆ ಉತ್ತಮ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ. ನಾನು ನಿರ್ದೇಶನದೊಂದಿಗೆ ನಾಯಕನಾಗೂ ಅಭಿನಯಿಸಿದ್ದೇನೆ. ಸಾತ್ವಿಕ ಈ ಚಿತ್ರದ ನಾಯಕಿ. ಎರಡೇ ಪಾತ್ರಗಳು ಮಾತ್ರ ನಿಮಗೆ ತೆರೆಯ ಮೇಲೆ ಕಾಣುವುದು. ಉಳಿದ ಪಾತ್ರಗಳು ಧ್ವನಿಯ ಮೂಲಕ ಚಿತ್ರಕ್ಕೆ ಜೀವ ತುಂಬಿದೆ. ಕಥೆಯನ್ನು ನಾನೇ ಬರೆದಿದ್ದೇನೆ. ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಸದ್ಯದಲ್ಲೇ ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ದಂಪತಿಗಳು ಬಂದು ನೋಡಿ ತಮ್ಮ ಅಭಿಪ್ರಾಯ ತಿಳಿಸಿ ಎಂದರು.
ಸಂಗೀತ ನಿರ್ದೇಶಕ ಅನಂತ್ ಆರ್ಯನ್, ಕಲರಿಸ್ಟ್ ಜೇಕಬ್ ಮ್ಯಾಥ್ಯೂ, ಕಾಸ್ಟ್ಯೂಮ್ ಡಿಸೈನರ್ ಋತು ಚೈತ್ರ, ಕಲಾ ನಿರ್ದೇಶಕ ಕ್ರಿಯೇಟಿವ್ ವಿಜಯ್, ವಿತರಕ ಜೈದೇವ್ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ “ಅಥಿ” ಚಿತ್ರದ ಕುರಿತು ಮಾತನಾಡಿದರು.