ತೆಲುಗಿನಲ್ಲಿ ಕನ್ನಡದ ಪ್ರತಿಭೆ ಡ್ಯಾನಿ ಕುಟ್ಟಪ್ಪ ಅಬ್ಬರ

ಬೋಯಾಪಾಟಿ ಶ್ರೀನಿ, ರಾಮ್‍ ಪೋತಿನೇನಿ ಜೋಡಿಯ ‘ಸ್ಕಂದ’ ಚಿತ್ರದಲ್ಲಿ ‘ಬೆಂಕಿ ಕಂಗಳ ನಟ ’

ಕನ್ನಡ ಚಿತ್ರರಂಗದಲ್ಲಿ ‘ಬೆಂಕಿ ಕಂಗಳ ನಟ’ ಎಂದೇ ಜನಪ್ರಿಯರಾಗಿರುವ ಡ್ಯಾನಿ ಕುಟ್ಟಪ್ಪ ಈಗ ತೆಲುಗಿನಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗಿನ ಮಾಸ್‍ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ, ರಾಮ್‍ ಪೋತಿನೇನಿ ಅಭಿನಯದ ‘ಸ್ಕಂದ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡ್ಯಾನಿಗೆ ಟಾಲಿವುಡ್‍ ಹೊಸದೇನಲ್ಲ. ‘ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ‘ಗದ್ದಲಕೊಂಡ ಗಣೇಶ್‍’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ ‘ಸ್ಕಂದ’ ಚಿತ್ರದಲ್ಲಿ ಅತೀ ಮುಖ್ಯವಾದ ನೆಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‍ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.
ಅದರ ಜೊತೆಗೆ, ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು, ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಡ್ಯಾನಿ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಾವಿರಾರು ಜನರ ಮುಂದೆ ಹೊಗಳಿದ್ದಾರೆ. ತೆಲುಗಿನಲ್ಲಿ ‘ಅಖಂಡ’, ‘ಲೆಜೆಂಡ್‍’, ‘ಸಿಂಹ’ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಬೋಯಾಪಾಟಿ ಶ್ರೀನು ಅವರಿಂದ ಮೆಚ್ಚುಗೆಯ ಮಾತುಗಳು ಕೇಳುವುದು ಅಷ್ಟು ಸುಲಭದ ಮಾತಲ್ಲ. ಅಂತಹ ಮಾತುಗಳನ್ನು ಕೇಳಿ ಡ್ಯಾನಿ ಖುಷಿಯಾಗಿದ್ದಾರೆ.

‘ಬೋಯಾಪಾಟಿ ಶ್ರೀನು ಅವರು ಪ್ರತಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದರಿಂದ ಹಿಡಿದು, ಆ ಪಾತ್ರ ಹೇಗಿರಬೇಕು, ಏನು ಮಾಡಬೇಕು ಎಂಬ ಸಣ್ಣಸಣ್ಣ ವಿವರಗಳಿಗೂ ಮಹತ್ವ ಕೊಡುತ್ತಾರೆ. ಯಾರಾದರೂ ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚುತ್ತದೆ. ಪಾತ್ರಕ್ಕೆ ಇನ್ನಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಡ್ಯಾನಿ.
‘ಸ್ಕಂದ’ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ ಡ್ಯಾನಿ ಕುಟ್ಟಪ್ಪ. ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್‍ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಹಲವು ಸಾಹಸಮಯ ಸನ್ನಿವೇಶಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಪಾತ್ರವನ್ನು Rude and Rough ಎಂದು ಬಣ್ಣಿಸುವ ಅವರು, ಈ ಚಿತ್ರವು ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಇನ್ನು, ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಹೊಸಬರು, ಹಳಬರು ಎನ್ನದೇ ಎಲ್ಲರೊಂದಿಗೂ ಕೆಲಸ ಮಾಡಲು ಎದುರು ನೋಡುತ್ತಿರುವ ಡ್ಯಾನಿ ಕುಟ್ಟಪ್ಪ, ‘ಇಂಥವರು ಇಂಥ ಪಾತ್ರ ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರದ ಕುರಿತು ಆರೋಗ್ಯಕರ ಚರ್ಚೆಗಳಾಗಬೇಕು. ಒಬ್ಬ ನಿರ್ದೇಶಕ ಮತ್ತು ನಟನ ನಡುವೆ ಚರ್ಚೆಗಳಾದಾಗ, ಒಂದೊಳ್ಳೆಯ ಪಾತ್ರ ಮತ್ತು ಚಿತ್ರವನ್ನು ಮಾಡಬಹುದು’ ಎನ್ನುತ್ತಾರೆ.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments