ಮೈಸೂರಿನ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಿಂದ ಚಿತ್ರತಂಡದ ಸದಸ್ಯರಿಗೆ ಕಡಿಮೆ ಬೆಲೆಗೆ ನಿವೇಶನ ನೀಡುವ ಯೋಜನೆ .
ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘ, ಮೈಸೂರಿನಲ್ಲಿ ಚಿತ್ರನಗರಿ ಬಡವಾಣೆ ಮತ್ತು ಗಂಧದ ಗುಡಿ ಫಮಲ್ಯಾಂಡ್ ನಿರ್ಮಿಸುವ ಪ್ರಯತ್ನದಲ್ಲಿದ್ದು, ಆ ಮೂಲಕ ಚಲನಚಿತ್ರರಂಗದ ಎಲ್ಲಾ ವರ್ಗದವರಿಗೆ ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ಕಡಿಮೆ ಬೆಲೆಗೆ ನಿವೇಶನ ನೀಡುವ ಯೋಜನೆ ಹಾಕಿಕೊಂಡಿದೆ. ಈ ಕುರಿತು ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರ ಐದು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದಿಂದ ಮಾನ್ಯತೆ ಪಡೆದುಕೊಳ್ಳಲಾಗಿದೆ. ಮೈಸೂರು – ಬನ್ನೂರು ರಸ್ತೆಯಲ್ಲಿ ಈಗಾಗಲೇ 50 ಎಕರೆ ಜಾಗವನ್ನು ನೋಡಲಾಗಿದೆ. ಯಾವುದೇ ಅಡೆತಡೆಗಳಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ನಿವೇಶನಗಳನ್ನು ನಿರ್ಮಾಣ ಮಾಡಿ ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ವರ್ಗದ ಜನರಿಗು ಹಾಗೂ ಸಾರ್ವಜನಿಕರಿಗೂ ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡಬೇಕೆಂಬುದೆ ಈ ಗೃಹ ನಿರ್ಮಾಣ ಸಂಘದ ಮುಖ್ಯ ಉದ್ದೇಶ.
ಕನ್ನಡ ಪರ ಹೋರಾಟಗಾರರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ನಿರ್ಮಾಪಕರ ಸಂಘದ ಮಾಜಿ ಅಧ್ಯಕ್ಷರಾದ ಡಿ.ಕೆ.ರಾಮಕೃಷ್ಣ ಹಾಗೂ ಕೆ.ಎಂ.ವೀರೇಶ್ ಅವರು ನಂದ ಗೋಕುಲ ಗೃಹ ನಿರ್ಮಾಣ ಸಂಘದಲ್ಲಿ ಸದಸ್ಯತ್ವ ಪಡೆದು, ಉದ್ದೇಶಿಸಿರುವ ಚಿತ್ರನಗರಿ ಬಡಾವಣೆ ಕಾರ್ಯ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ನಮ್ಮ ಸಂಘಕ್ಕೆ ಸದಸ್ಯತ್ವ ಪಡೆಯಲು ಈಗ ಯಾವುದೇ ಶುಲ್ಕ ವಿಧಿಸಿಲ್ಲ. ನಿವೇಶನ ನೀಡುವ ಸಮಯದಲ್ಲಿ ಮಾತ್ರ ಹಣ ತೆಗೆದುಕೊಳ್ಳಲಾಗುವುದು ಎಂದು ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದ ಸಂಸ್ಥಾಪಕ ಹಾಗೂ ನಟ ಮೈಸೂರಿನ ಶಿವಾಜಿ ತಿಳಿಸಿದ್ದಾರೆ .