ಯಶಸ್ಸಿನ ಹಾದಿಯಲ್ಲಿ ವಿನೋದ್ ಪ್ರಭಾಕರ್ ಅಭಿನಯದ “ಫೈಟರ್” .
ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ನೂತನ್ ಉಮೇಶ್ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ ” ಫೈಟರ್ ” ಚಿತ್ರ ಕಳೆದವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಸಂಭ್ರಮವನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು.
ನಮ್ಮ ಚಿತ್ರವನ್ನು ನೋಡಿ ಹಾರೈಸುತ್ತಿರುವ ಎಲ್ಲರಿಗೂ ಧನ್ಯವಾದ ಎಂದು ಮಾತು ಆರಂಭಿಸಿದ ನಿರ್ದೇಶಕ ನೂತನ್ ಉಮೇಶ್, ಬಿಡುಗಡೆಯಾದ ದಿನದಿಂದಲೂ “ಫೈಟರ್” ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಜನ ಚಿತ್ರವನ್ನು ಪ್ರೀತಿಸುತ್ತಿದ್ದಾರೆ. ಚಿತ್ರದಲ್ಲಿರುವ ಸಾಕಷ್ಟು ಉತ್ತಮ ಅಂಶಗಳು ನೋಡುಗರಿಗೆ ಬಹಳ ಇಷ್ಟವಾಗುತ್ತಿದೆ. ಮಾಲ್ ಗಳಲ್ಲೂ ಫ್ಯಾಮಿಲಿ ಆಡಿಯನ್ಸ್ ಹೆಚ್ಚು ಬರುತ್ತಿದ್ದಾರೆ ಎಂದು ತಿಳಿಸಿದರು.
ಒಳ್ಳೆಯ ಕಂಟೆಂಟ್ ಇರುವ ಚಿತ್ರವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ “ಫೈಟರ್” ಸಿನಿಮಾ ಉದಾಹರಣೆ. ಚಿತ್ರದ ಯಶಸ್ಸಿಗೆ ಕಾರಣರಾದ ಸಮಸ್ತರಿಗೂ ನನ್ನ ಧನ್ಯವಾದ. ನಾನು ಈ ಚಿತ್ರದಲ್ಲಿ ರೈತರ ಪರ ಹೋರಾಡುವ “ಫೈಟರ್”. ನಮ್ಮ ಚಿತ್ರ ರೈತರಿಗೂ ಇಷ್ಟವಾಗಿದೆ. ಸಾಕಷ್ಟು ರೈತ ಮಿತ್ರರು ಫೋನ್ ಮೂಲಕ ಚಿತ್ರ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇಂದಿನಿಂದ ನಾನು ಬೇರೆಬೇರೆ ಊರುಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದೇನೆ. ಮೊದಲು ರಾಮನಗರದಿಂದ ಆರಂಭಿಸುತ್ತಿದ್ದೇನೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಒಳ್ಳೆಯದಾಗಲಿ. ಆದಷ್ಟು ಬೇಗ ” ಫೈಟರ್ ಭಾಗ 2″ ಶುರುವಾಗಲಿ ಎಂದರು ನಾಯಕ ವಿನೋದ್ ಪ್ರಭಾಕರ್.
“ಫೈಟರ್” ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಮನ ತುಂಬಿ ಬಂದಿದೆ. ನಮ್ಮ ಚಿತ್ರಕ್ಕೆ ಸಾಕಷ್ಟು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿದ್ದವು. ಕಳೆದ ನಾಲ್ಕು ದಿನಗಳಿಂದ ವಿವಿಧ ಸಂಘಟನೆಯವರು, ರೈತರು ನಮ್ಮ ಚಿತ್ರವನ್ನು ನೋಡಿ ಒಳ್ಳೆಯ ಮಾತುಗಳಾಡುತ್ತಿದ್ದಾರೆ. ಸದ್ಯದಲ್ಲೇ ವಕೀಲರ ಸಂಘದವರು ಚಿತ್ರವನ್ನು ನೋಡುವುದಾಗಿ ಹೇಳಿದ್ದಾರೆ. ಇಂದಿನಿಂದ ನಾಯಕ ವಿನೋದ್ ಪ್ರಭಾಕರ್ ಅವರ ಸಾರಥ್ಯದಲ್ಲಿ ರಾಜ್ಯಾದ್ಯಂತ ಪ್ರವಾಸ ಆರಂಭವಾಗಲಿದೆ. ನಮ್ಮ ಚಿತ್ರವನ್ನು ಹೆಚ್ಚಿನ ಜನ ನೋಡಿ ಪ್ರೋತ್ಸಾಹಿಸಿ ಎನ್ನುತ್ತಾರೆ ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ.
ನಾಯಕಿ ಲೇಖ ಚಂದ್ರ ಸಹ ಚಿತ್ರಕ್ಕೆ ಹಾಗೂ ತಮ್ಮ ಪಾತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತಪಡಿಸಿದರು.