ನಗುವಿನ ಹಬ್ಬಕ್ಕೆ ಸಜ್ಜಾದ ‘ರಿಲ್ಯಾಕ್ಸ್’. ಕೋಮಲ್–ಸೋನಲ್ ಜೋಡಿ, ವಿನೋದ್ ಪ್ರಭಾಕರ್ ವಿಶೇಷ ಪಾತ್ರ. ನವೆಂಬರ್ 27ಕ್ಕೆ ಅದ್ದೂರಿ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ ಕೋಮಲ್ ಕುಮಾರ್ ಇದೀಗ ನಟಿ ಸೋನಲ್ ಮೊಂತೆರೊ ಅವರೊಂದಿಗೆ ‘ರಿಲ್ಯಾಕ್ಸ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅಂಬಟಿ ಮಧುಮೋಹನ್ ಕೃಷ್ಣ ನಿರ್ಮಾಣದ, ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರಕ್ಕೆ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ನವೆಂಬರ್ 27ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ಮಾಪಕರಾದ ಭಾ.ಮ. ಹರೀಶ್ ಹಾಗೂ ಚಿಂಗಾರಿ ಮಹದೇವ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ ಚಿತ್ರದ ಕಥೆ ಹಾಗೂ ನಿರ್ಮಾಣದ ಅನುಭವವನ್ನು ಹಂಚಿಕೊಂಡರು. “ಚಿತ್ರದ ಶೇಕಡಾ 25ರಷ್ಟು ಚಿತ್ರೀಕರಣ ಮುಗಿದ ಬಳಿಕ ನಾನು ಸಿನಿಮಾ ನೋಡಿದೆ. ನಟ ಕೋಮಲ್ ಅವರ ಪಾತ್ರ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ಸಿನಿಮಾವನ್ನು ಟೇಕ್ ಓವರ್ ಮಾಡಲು ನಿರ್ಧರಿಸಿದೆ. ಬಡ ಕುಟುಂಬದ ನಾಯಕ ಹಾಗೂ ಶ್ರೀಮಂತ ಮನೆತನದ ನಾಯಕಿಯ ನಡುವಿನ ಕಥೆ ಇದಾಗಿದೆ. ಸಿನಿಮಾ ನೋಡಿ ಖುಷಿಯಾಯಿತು. ಹಣ ಬರುತ್ತದೆ, ಹೋಗುತ್ತದೆ. ಆದರೆ ಉತ್ತಮ ಚಿತ್ರ ನಿರ್ಮಿಸಿದ ತೃಪ್ತಿ ನನಗಿದೆ. ಅಪ್ಪ-ಮಗನ ಸಂಬಂಧದ ಸನ್ನಿವೇಶಗಳು ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ” ಎಂದರು.
ನಿರ್ದೇಶಕ ಶ್ರೀನಿವಾಸ್ ಮಂಡ್ಯ ಚಿತ್ರದ ಬಿಡುಗಡೆಯ ಕುರಿತು ಮಾಹಿತಿ ನೀಡುತ್ತಾ, “ನವೆಂಬರ್ 27ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ಪ್ರೇಕ್ಷಕರಿಗಾಗಿ ಮಾಡಿರುವ ಸಿನಿಮಾ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಿ. ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ಕೋಮಲ್ ಕುಮಾರ್ ತಮ್ಮ ಎಂದಿನ ಹಾಸ್ಯಮಯ ಮಾತುಗಳ ಮೂಲಕ ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. “ನಿರ್ದೇಶಕ ದಿನೇಶ್ ಬಾಬು ಅವರೊಂದಿಗೆ ಸೇರಿ ಕೇವಲ ಎಂಟೂವರೆ ದಿನಗಳಲ್ಲಿ 38 ಲಕ್ಷ ರೂಪಾಯಿ ವೆಚ್ಚದಲ್ಲಿ ‘ಮಿಸ್ಟರ್ ಗರಗಸ’ ಚಿತ್ರ ಮಾಡಿದ್ದೆವು. ಆ ಸಿನಿಮಾ ಉತ್ತಮ ಹಣ ಗಳಿಸಿತು. ‘ರಿಲ್ಯಾಕ್ಸ್’ ಚಿತ್ರವೂ ನನಗೆ ಒಳ್ಳೆಯ ಮೈಲೇಜ್ ನೀಡುವ ಸಿನಿಮಾ ಎಂಬ ವಿಶ್ವಾಸವಿದೆ. ಎಲ್ಲರ ಸಹಕಾರದಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಈ ಚಿತ್ರವನ್ನು ಒಬ್ಬರೇ ಕುಳಿತು ನೋಡಿದರೆ ನಗುತ್ತೀರಿ, ಜೊತೆಯಲ್ಲಿ ಕುಳಿತು ನೋಡಿದರೆ ಬಿದ್ದು ಬಿದ್ದು ನಗುತ್ತೀರಿ. ಚಿತ್ರವನ್ನು ನೋಡಿ ಹರಸಿ” ಎಂದು ಮನವಿ ಮಾಡಿದರು.
ನಾಯಕಿ ಸೋನಲ್ ಮೊಂತೆರೊ ಚಿತ್ರದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸುತ್ತಾ, “ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ಹಾಗೂ ಚಿತ್ರರಂಗದ ಎಲ್ಲರ ಸಹಕಾರ ಇರಲಿ” ಎಂದು ಆಶಿಸಿದರು.
ಚಿತ್ರಕ್ಕೆ ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಹಾಗೂ ಅರವಿಂದ್ ರಾಜ್ ಸಂಕಲನವಿದೆ. ನಂದು ಹಿನ್ನೆಲೆ ಸಂಗೀತ ನೀಡಿದ್ದು, ಯೋಗಾನಂದ್ ಸಾಹಸ ನಿರ್ದೇಶನ ಮಾಡಿದ್ದಾರೆ. ಕಲೈ ಮತ್ತು ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.
ಹಾಸ್ಯ, ಪ್ರೀತಿ ಹಾಗೂ ಭಾವನಾತ್ಮಕ ಅಂಶಗಳೊಂದಿಗೆ ಮೂಡಿಬಂದಿರುವ ‘ರಿಲ್ಯಾಕ್ಸ್’ ಚಿತ್ರದಲ್ಲಿ ಕೋಮಲ್ ಅವರ ಹಾಸ್ಯ, ಸೋನಲ್ ಅವರ ಅಭಿನಯ ಹಾಗೂ ವಿನೋದ್ ಪ್ರಭಾಕರ್ ಅವರ ವಿಶೇಷ ಪಾತ್ರ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ನಿರೀಕ್ಷೆಯಿದೆ. ನವೆಂಬರ್ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಪ್ರೇಕ್ಷಕರನ್ನು ನಗಿಸುವ ಭರವಸೆಯೊಂದಿಗೆ ತೆರೆಗೆ ಬರಲು ಸಜ್ಜಾಗಿದೆ.

