ಕರ್ನಾಟಕ ಚಲನಚಿತ್ರ ಅಕಾಡೆಮಿಯ ‘ಸಿನಿ ಸಂವಾದ’ಕ್ಕೆ ಚಾಲನೆ
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿರುವ ‘ಸಿನಿ ಸಂವಾದ’ ಮೂರು ದಿನಗಳ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣಕ್ಕೆ ಇಂದು (Nov 14) ಚಾಲನೆ ಸಿಕ್ಕಿದೆ. ಮಾಜಿ ಸಂಸದ, ಹಾಲಿ BAMUL ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಆವರಣದಲ್ಲಿ ಈ ಕಾರ್ಯಾಗಾರ ಆಯೋಜನೆಗೊಂಡಿದೆ. ರಾಜ್ಯದ ಹಲವೆಡೆಯಿಂದ ಸಿನಿಮಾ ಕಾರ್ಯಾಗಾರಕ್ಕೆ ಆಗಮಿಸಿರುವ ಅಭ್ಯರ್ಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು, ‘ಸಿನಿಮಾರಂಗದ ಅನುಭವಿಗಳು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕಿಗಳಾಗಿ ಭಾಗವಹಿಸುತ್ತಿದ್ದಾರೆ. ಅವರಿಂದ ಸಿನಿಮಾ ಕಲೆಯ ಕುರಿತಂತೆ ಉತ್ತಮ ಒಳನೋಟಗಳು ಸಿಗಲಿವೆ. ಅಕಾಡೆಮಿಯ ಈ ಕಾರ್ಯಕ್ರಮವನ್ನು ಸಿನಿಮಾಸಕ್ತರು ಸದುಪಯೋಗಪಡಿಸಿಕೊಳ್ಳಿ’ ಎಂದು ಸಲಹೆ ಮಾಡಿದರು.
‘AI ಟೆಕ್ನಾಲಜಿ ಬಂದ ನಂತರ ಮನರಂಜನಾ ಉದ್ಯಮದಲ್ಲಿ ಸಾಕಷ್ಟು ಏರುಪೇರುಗಳಾಗಿವೆ. ಆದರೆ AI ಸೃಷ್ಟಿಸಿದವರೂ ಮನುಷ್ಯರೇ ಆಗಿದ್ದಾರೆ. ಹಾಗಾಗಿ ಹೆದರುವ ಅಗತ್ಯವಿಲ್ಲ. ಇಲ್ಲಿನ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕಿದೆ’ ಎಂದ ಸುರೇಶ್ ಅವರು ಸಿನಿಮಾರಂಗದ ಅಸಂಘಟಿತ ಕಾರ್ಮಿಕರ ಬಗ್ಗೆ ಪ್ರಸ್ತಾಪಿಸಿದರು. ಅಸಂಘಟಿತ ಕಾರ್ಮಿಕರು ಹಾಗೂ ಅನನುಕೂಲದಲ್ಲಿರುವ ಸಿನಿಮಾ ರಂಗದವರಿಗೆ ಯಾವ ರೀತಿ ನೆರವಾಗಬಹುದು ಎನ್ನುವ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಲ್ಲಿ ಮಾತನಾಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕರಾದ ಕೆ.ಗೋಪಾಲಯ್ಯ, ‘ನಂದಿನಿ ಲೇಔಟ್ನಲ್ಲಿರುವ ಅಕಾಡೆಮಿ ಕಟ್ಟಡವು ನಮ್ಮ ಕ್ಷೇತ್ರದ ಅತ್ಯಮೂಲ್ಯ ಆಸ್ತಿಯಾಗಿದೆ. ಈ ಸುಸಜ್ಜಿತ ಕಟ್ಟಡದ ಒಳಭಾಗದಲ್ಲಿ ಇನ್ನೂ ಕೆಲವು ಕೆಲಸಗಳು ಬಾಕಿ ಇವೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯವಿರುವ ಅನುದಾನವನ್ನು ಭರಿಸಿ ಕಾಮಗಾರಿ ಪೂರ್ಣಗೊಂಡ ಬಳಿಕ ಕಟ್ಟಡವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗುವುದು’ ಎಂದ ಅವರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಶುಭಹಾರೈಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ ಅವರು ಮಾತನಾಡಿ, ‘ಸಿನಿ ಸಂವಾದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಹಲವೆಡೆಯಿಂದ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಾರ್ಯಾಗಾರಕ್ಕೆ ನೋಂದಾಯಿಸಿಕೊಂಡಿದ್ದಾರೆ. ಸಿನಿಮಾಸಕ್ತರ ಹಸಿವು ನೀಗಿಸುವಲ್ಲಿ ಇಂತಹ ಕಾರ್ಯಕ್ರಮಗಳು ನೆರವಾಗಲಿವೆ. ಮುಂದೆಯೂ ಕೂಡ ಪ್ರತಿ ವರ್ಷ ಅಕಾಡೆಮಿಯಿಂದ ಇಂತಹ ಕಾರ್ಯಕ್ರಮಗಳು ಆಗಲಿ ಎಂದು ಆಶಿಸುತ್ತೇನೆ. ಈ ಸಂದರ್ಭದಲ್ಲಿ ಅಕಾಡೆಮಿಯು ಸಿನಿಯಾನ ಶೀರ್ಷಿಕೆಯಡಿ ಸಿನಿಮಾ ಆರ್ಕೈವ್ ಪೋರ್ಟಲ್ ಆರಂಭಿಸುತ್ತಿದೆ. ಇಲ್ಲಿ ಕನ್ನಡ ಸಿನಿಮಾ ಇತಿಹಾಸ ದಾಖಲಿಸುವ ಹಾಗೂ ಸಿನಿಪ್ರಿಯರಿಗೆ ಇತಿಹಾಸ ತಲುಪಿಸುವ ಕೆಲಸ ಆಗಲಿದೆ. ಸಿನಿಮಾಸಕ್ತರ ಸಹಕಾರ, ಸ್ಪಂದನೆ ಈ ಯೋಜನೆಗೆ ಇರಲಿ’ ಎಂದು ಮನವಿ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ್, ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ, ನಿರ್ಮಾಪಕರಾದ ಸಾ ರಾ ಗೋವಿಂದ್ ಮತ್ತು ಬಸಂತ ಕುಮಾರ್ ಪಾಟೀಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ವಿನೋದ್ ಚಂದ್ರ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್, ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಸೋಮಶೇಖರ್, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಗಣೇಶರಾವ್ ಕೇಸರ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರು ಮತ್ತಿತರ ಗಣ್ಯರು ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಮಹತ್ವದ ಯೋಜನೆಯಾದ ‘ಸಿನಿಯಾನ’ ಸಿನಿಮಾ ಆರ್ಕೈವ್ ಪೋರ್ಟಲ್ ಲೋಕಾರ್ಪಣೆಗೊಂಡಿತು. ಮಾಜಿ ಸಂಸದ, ಹಾಲಿ BAMUL ಅಧ್ಯಕ್ಷ ಡಿ.ಕೆ.ಸುರೇಶ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಗಳಾದ ಮಂಜುನಾಥ್ ಪೋರ್ಟಲ್ ಲಾಂಚ್ ಮಾಡಿ ಶುಭಹಾರೈಸಿದರು. ಸಿನಿಮಾ ಪತ್ರಕರ್ತ ಶಶಿಧರ ಚಿತ್ರದುರ್ಗ ಅವರು ‘ಸಿನಿಯಾನ’ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನವೆಂಬರ್ 14ರಿಂದ 16ರವರೆಗಿನ ಮೂರು ದಿನಗಳ ‘ಸಿನಿ ಸಂವಾದ’ ಮೂರು ದಿನಗಳ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣದಲ್ಲಿ ಪ್ರತಿದಿನ ವಿವಿಧ ಗೋಷ್ಠಿಗಳಿರುತ್ತವೆ. ಚಿತ್ರರಂಗದ ಹಿರಿಯ ನಿರ್ದೇಶಕರು, ತಂತ್ರಜ್ಞರು ಹಾಗೂ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 17ರಂದು ಮಹಿಳೆಯರಿಗಾಗಿ ವಿಶೇಷ ಸಿನಿಮಾ ಕಾರ್ಯಾಗಾರ ಆಯೋಜನೆಗೊಂಡಿದೆ.
