ಜೂನ್ 5 ರಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಗೂ ಬಹುಭಾಷಾ ತಾರೆ ಲಕ್ಷ್ಮೀ ಅಭಿನಯದ “ಮಿಥುನಂ” ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆ
ಭಾರತ ದೇಶ ಕಂಡ ಅತ್ಯುತ್ತಮ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅತ್ಯುತ್ತಮ ನಟರೂ ಹೌದು. ಅವರು ಅಭಿನಯಿಸಿದ ಕೊನೆಯ ಚಿತ್ರ “ಮಿಥುನಂ”. ಖ್ಯಾತ ನಿರ್ದೇಶಕ ತನಿಕೆಳ್ಳ ಭರಣಿ ಅವರ ನಿರ್ದೇಶನದ ಈ ತೆಲುಗು ಚಿತ್ರದ ಕನ್ನಡ ಅವತರಣಿಕೆ ಜೂನ್ 5 ರಂದು ಬಿಡುಗಡೆಯಾಗಲಿದೆ. ಜೂನ್ 4 ಎಸ್ ಪಿ ಬಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಹರಿದಾಸರ ಚಿತ್ರಗಳ ನಿರ್ದೇಶಕರೆಂದೆ ಹೆಸರಾಗಿರುವ ಮಧುಸೂದನ್ ಹವಾಲ್ದಾರ್ ಹಾಗೂ ತ್ರಿವಿಕ್ರಮ ಜೋಶಿ ಅವರ ಸಾರಥ್ಯದಲ್ಲಿ ಈ ಚಿತ್ರದ ಕನ್ನಡದ ಅವತರಣಿಕೆ ಸಿದ್ದವಾಗಿದೆ. ಶ್ರೀದೇವಿ ಶ್ರೀನಿವಾಸ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆ ಸಮಾರಂಭ ಹಾಗೂ ಪೂರ್ವಭಾವಿ ಪ್ರದರ್ಶನ ನಡೆಯಿತು. ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಸುಂದರರಾಜ್, ಎಸ್ ಪಿ ಬಿ ಅವರ ಆಪ್ತರಾದ ಗೋಪಿ, ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ಶ್ರೀದೇವಿ ಶ್ರೀನಿವಾಸ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಎಸ್ ಪಿ ಬಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು. ” ಮಿಥುನಂ ” ಚಿತ್ರದ ಕನ್ನಡದ ಅವತರಣಿಕೆ ಯಶಸ್ವಿಯಾಗಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಧುಸೂದನ್ ಹವಾಲ್ದಾರ್, ನನಗೆ ತನಿಕೆಳ್ಳ ಭರಣಿ ಅವರು ಪರಿಚಯ. ಅವರ ಬಳಿ ಈ ಸಿನಿಮಾದ ರೈಟ್ಸ್ ಕೇಳಿದಾಗ, ಅವರು ನಿರ್ಮಾಪಕರನ್ನು ಕೇಳಿ ಎಂದರು. ನಿರ್ಮಾಪಕರು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಖುಷಿಯಿಂದ ರೈಟ್ಸ್ ನೀಡಿದರು. ಅದರೆ ಚಿತ್ರವನ್ನು ಆರು ತಿಂಗಳಲ್ಲಿ ಬಿಡುಗಡೆ ಮಾಡಬೇಕು ಮತ್ತು ಎಸ್ ಪಿ ಬಿ ಅವರ ಧ್ವನಿಗೆ ಯಾವುದೇ ಧಕ್ಕೆ ಬಾರದ ಹಾಗೆ ಅಂತಹವರಿಂದ ಡಬ್ಬಿಂಗ್ ಮಾಡಿಸ ಬೇಕು ಎಂದರು. ಕನ್ನಡದಲ್ಲಿ ಪ್ರಭಾಕರ್ ಅವರ ಧ್ವನಿ ಕೇಳಿದಾಗ ಎಸ್ ಪಿ ಬಿ ಅವರ ಧ್ವನಿ ಕೇಳಿದ ಹಾಗೆ ಅನಿಸುತ್ತದೆ. ಇನ್ನೂ, ಈ ಚಿತ್ರ ಹದಿನೈದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಆಗಿನ ಸೆನ್ಸಾರ್ ಮಂಡಳಿ ನಿಯಮಗಳಿಗೂ ಈಗಿನ ನಿಯಮಗಳಿಗೂ ವ್ಯತ್ಯಾಸವಿದೆ. ಅನಿಮಲ್ ಬೋರ್ಡ್ ಪರ್ಮಿಷನ್ ದೊರಕುವುದು ಸ್ವಲ್ಪ ತಡವಾಗಿರುವುದರಿಂದ ಕನ್ನಡದ ಅವತರಣಿಕೆ ಬಿಡುಗಡೆ ಸ್ವಲ್ಪ ತಡವಾಯಿತು. ಈಗ ಜೂನ್ 5 ರಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ನನ್ನ ಸಹಕಾರಕ್ಕೆ ನಿಂತಿರುವ ತ್ರಿವಿಕ್ರಮ ಜೋಶಿ ಅವರಿಗೆ ಹಾಗೂ ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು.
ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ತ್ರಿವಿಕ್ರಮ ಜೋಶಿ ಅವರು ಎಸ್ ಪಿ ಬಿ ಹಾಗೂ ಲಕ್ಷ್ಮೀ ಅವರು ಅದ್ಭುತ ಕಲಾವಿದರು. ವಿದೇಶದಲ್ಲಿರುವ ಮಕ್ಕಳು ತಂದೆ ತಾಯಿ ವೃದ್ಧಾಪ್ಯದ ಸಮಯದಲ್ಲೂ ನೋಡಿಕೊಳ್ಳಲು ಬರದೆ ಇದ್ದಾಗ ಆ ತಂದೆ ತಾಯಿ ಪರಿಸ್ಥಿತಿ ಹೇಗಿರತ್ತದೆ ಎನ್ನುವುದು ಈ ಚಿತ್ರದ ಕಥಾಸಾರಾಂಶ ಎಂದು ತಿಳಿಸಿದರು.
