ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ನೂತನ ಚಿತ್ರ “#MB” . ಮುಂಬೈನ ADD – ONE ಫಿಲಂಸ್ ನಿರ್ಮಾಣದ ಈ ಚಿತ್ರಕ್ಕೆ ” ವಲ್ಲರಸು” ಖ್ಯಾತಿಯ ಎನ್ ಮಹಾರಾಜನ್ ನಿರ್ದೇಶನ .
ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ “#MB” ಎಂಬ ನೂತನ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಮುಂಬೈ ಮೂಲದ ಖ್ಯಾತ ADD – ONE ಫಿಲಂಸ್ ಸಂಸ್ಥೆ ಲಾಂಛನದಲ್ಲಿ ಮನೋಜ್ ಬನೋಡೆ ಹಾಗೂ ಖೇಮ್ ಚಂದ್ ಖಡ್ಗಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿಜಯಕಾಂತ್ ಅಭಿನಯದ ಸೂಪರ್ ಹಿಟ್ “ವಲ್ಲರಸು” ಚಿತ್ರದ ನಿರ್ದೇಶಕ ಎನ್ ಮಹಾರಾಜನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈವರೆಗೂ ಮೂರು ತಮಿಳು ಹಾಗೂ ಸನ್ನಿ ಡಿಯೋಲ್ ಅಭಿನಯದ ಹಿಂದಿ ಚಿತ್ರವೊಂದನ್ನು ನಿರ್ದೇಶಿಸಿರುವ ಮಹಾರಾಜನ್ ಅವರು ನಿರ್ದೇಶಿಸುತ್ತಿರುವ ಮೊದಲ ಕನ್ನಡ ಚಿತ್ರವಿದು.
ADD – ONE ಫಿಲಂಸ್ ಸಂಸ್ಥೆಯ ಮೂಲಕ ಸಾಕಷ್ಟು ದೊಡ್ಡದೊಡ್ಡ ಇವೆಂಟ್ ಗಳನ್ನು ಆಯೋಜಿಸಿರುವ ಮನೋಜ್ ಬನೋಡೆ ಹಾಗೂ ಖೇಮ್ ಚಂದ್ ಖಡ್ಗಿ ಅವರು ಈಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಮೊದಲ ನಿರ್ಮಾಣದ ಚಿತ್ರವನ್ನು ದಕ್ಷಿಣ ಭಾರತದಲ್ಲಿ, ಅದರಲ್ಲೂ ಕನ್ನಡ ಚಿತ್ರವೊಂದನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ.
ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ಈ ಚಿತ್ರ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಾಣವಾಗುತ್ತಿದೆ. ಕನ್ನಡದ ಹೆಸರಾಂತ ನಟ ಶಿವರಾಜಕುಮಾರ್ ಅವರ ಅಭಿನಯದ ಈ ಚಿತ್ರವನ್ನು ನಿರ್ಮಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ಮಾಪಕರು.
“MB” ಎಂದರೆ ಏನು? ಎಂಬ ವಿಷಯವನ್ನು ಗೌಪ್ಯವಾಗಿಟ್ಟಿರುವ ನಿರ್ದೇಶಕರು, ಮುಂದಿನ ದಿನಗಳಲ್ಲಿ ಶೀರ್ಷಿಕೆಯ ವಿವರಣೆ ಹಾಗೂ ಚಿತ್ರತಂಡದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. 2025ರ ಮಧ್ಯದಲ್ಲಿ ಚಿತ್ರವನ್ನು ಆರಂಭಿಸುವುದಾಗಿ ನಿರ್ಮಾಪಕರು ಹೇಳಿದ್ದಾರೆ.