ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂದಮೂರಿ ಬಾಲಕೃಷ್ಣ ಪುತ್ರ ನಂದಮೂರಿ ಮೋಕ್ಷಜ್ಞ.
ಟಾಲಿವುಡ್ ನಟ ನಂದಮೂರಿ ಬಾಲಣ್ಣನ ಮಗ ನಂದಮೂರಿ ಮೋಕ್ಷಜ್ಞ ತೆಲುಗು ಚಿತ್ರರಂಗಕ್ಕೆ ಅದ್ಧೂರಿಯಾಗಿಯೇ ಎಂಟ್ರಿಕೊಡುತ್ತಿದ್ದಾರೆ. ಸುಧಾಕರ್ ಚೆರುಕುರಿ ಅವರ ಎಸ್‌ಎಲ್‌ವಿ ಸಿನಿಮಾಸ್ ಮತ್ತು ಲೆಜೆಂಡ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಸಿನಿಮಾ ಮೂಲಕ ಮೋಕ್ಷಜ್ಞ ಟಾಲಿವುಡ್ ಚಿತ್ರರಂಗಕ್ಕೆ ಆಗಮಿಸಲು ಸಜ್ಜಾಗಿದ್ದಾರೆ.
ಮೋಕ್ಷಜ್ಞ ಸಿನಿಮಾರಂಗಕ್ಕೆ ಬರುವುದು ಯಾವಾಗ, ಅವರ ಲಾಂಚ್ ಯಾವಾಗ? ನಿರ್ದೇಶಕರು ಯಾರು? ನಿರ್ಮಾಪಕರು ಯಾರು ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಇಂದು (ಸೆ. 06) ಮೋಕ್ಷಜ್ಞ ಅವರ ಬರ್ತಡೇ. ಈ ನಿಮಿತ್ತ ಪುರಾಣ ಹಿನ್ನೆಲೆಯ ಕಥೆ ಆಧರಿಸಿದ ಸಿನಿಮಾ ಘೋಷಣೆಯಾಗಿದೆ. ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಆಗಿದೆ. ಇತ್ತೀಚಿನ ಹನುಮಾನ್ ಸಿನಿಮಾ ಮೂಲಕ ಯಶಸ್ಸು ಪಡೆದ ನಿರ್ದೇಶಕ ಪ್ರಶಾಂತ್ ವರ್ಮಾ ಮೋಕ್ಷಜ್ಞ ಅವರ ಚೊಚ್ಚಲ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ನಿರ್ದೇಶಕ ಪ್ರಶಾಂತ್ ವರ್ಮಾ ಮಾತನಾಡಿ, “ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಕರೆತರುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಬಾಲಕೃಷ್ಣ ಅವರು ನನ್ನ ಮತ್ತು ನನ್ನ ಕಥೆಯ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾನು ಸದಾ ಚಿರಋಣಿ. ಈ ಸ್ಕ್ರಿಪ್ಟ್ ನಮ್ಮ ಇತಿಹಾಸದಿಂದ ಸ್ಫೂರ್ತಿ ಪಡೆದಿದೆ, ಚಿನ್ನದ ಗಣಿಯ ಕುರಿತ ಸಿನಿಮಾ ಇದು” ಎಂದಿದ್ದಾರೆ.
ನಿರ್ಮಾಪಕ ಸುಧಾಕರ್ ಚೆರುಕುರಿ ಮಾತನಾಡಿ, “ಮೋಕ್ಷಜ್ಞ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದಕ್ಕೆ ಖುಷಿಯಿದೆ. ಈ ಸುವರ್ಣ ಅವಕಾಶ ನೀಡಿದ ಬಾಲಕೃಷ್ಣ ಅವರಿಗೆ ಧನ್ಯವಾದಗಳು. ಮೋಕ್ಷಜ್ಞ ಅವರ ಚೊಚ್ಚಲ ಚಿತ್ರಕ್ಕೆ ಪ್ರಶಾಂತ್ ವರ್ಮಾ ಸರಿಹೊಂದುವ ರೋಚಕ ಸ್ಕ್ರಿಪ್ಟ್‌ನೊಂದಿಗೆ ಬಂದಿದ್ದಾರೆ. ಈ ಚಿತ್ರದ ಬಗ್ಗೆ ನಾವೆಲ್ಲರೂ ಉತ್ಸುಕರಾಗಿದ್ದೇವೆ” ಎಂದಿದ್ದಾರೆ.