ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ . ಇದು ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ .ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ .

ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ “ಚೀತಾ” ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಈ ಚಿತ್ರಕ್ಕಾಗಿ ನಗರದ ಹೆಚ್ ಎಂ ಟಿ ಫ್ಯಾಕ್ಟರಿ ಆವರಣದಲ್ಲಿ ಬೃಹತ್ ಮಾರ್ಕೆಟ್ ಸೆಟ್ ಹಾಕಲಾಗಿದೆ. ಮಾಧ್ಯಮದವರನ್ನು ಚಿತ್ರೀಕರಣ ಸ್ಥಳಕ್ಕೆ ಆಹ್ವಾನಿಸಿದ್ದ ಚಿತ್ರತಂಡದ ಸದಸ್ಯರು “ಚೀತಾ” ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ರಾಜ ಕಲೈ ಕುಮಾರ್, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಾನು ಮೊದಲು ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದು ಪ್ರಜ್ವಲ್ ಅವರ ಜೊತೆ. ಈಗ ನನ್ನ ಮೊದಲ ನಿರ್ದೇಶನದ ಚಿತ್ರಕ್ಕೂ ಅವರೆ ನಾಯಕ. “ಚೀತಾ”, ಮಾರ್ಕೆಟ್ ನಲ್ಲೇ ನಡೆಯುವ ಕಥೆ. ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಕಥೆಯೂ ಹೌದು. ಪ್ರಜ್ವಲ್ ಅವರದು ಈ ಚಿತ್ರದಲ್ಲಿ ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ದ ಹೋರಾಟ ಮಾಡುವ ಹೋರಾಟಗಾರನ ಪಾತ್ರ. ಅಲ್ಲೇ ಬೆಳೆದು ಅಲ್ಲೇ ಇರುವ ಆ ಹುಡುಗನ ಕಂಡರೆ ಅಲ್ಲಿನ ಜನರಿಗೆ ಅಚ್ಚುಮೆಚ್ಚು. ಈಗಿನ ಜನರಿಗೆ ಬೇಕಾಗುವ ಎಲ್ಲಾ ರೀತಿಯ ಅಂಶಗಳು ಈ ಚಿತ್ರದಲ್ಲಿದೆ.

ಕಲಾ ನಿರ್ದೇಶಕ ಶಿವಕುಮಾರ್ ಬೃಹತ್ ಮಾರುಕಟ್ಟೆ ಸೆಟ್ ಹಾಕಿದ್ದಾರೆ. ಸುಮಾರು ಎರಡು ತಿಂಗಳ ಕಾಲ ಇನ್ನೂರಕ್ಕೂ ಅಧಿಕ ಜನರ ಪರಿಶ್ರಮದಲ್ಲಿ ಈ ಅದ್ದೂರಿ ಸೆಟ್ ನಿರ್ಮಾಣವಾಗಿದೆ. ಹೆಚ್ಚಿನ ಚಿತ್ರೀಕರಣ ಇದೇ ಜಾಗದಲ್ಲಿ ನಡೆಯುತ್ತದೆ. ಒಂದು ವಾರಗಳ ಕಾಲ ಮಾತ್ರ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಹಿರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ನಮ್ಮ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ. ಗುರು ಜಗ್ಗೇಶ್, ಶೃತಿ ಹರಿಹರನ್, ರಂಗಾಯಣ ರಘು, ಶಿವರಾಜ್ ಕೆ ಆರ್ ಪೇಟೆ, ಸಿದ್ಲಿಂಗು ಶ್ರೀಧರ್, ಟೆನ್ನಿಸ್ ಕೃಷ್ಣ, ” ವಾಮನ” ಚಿತ್ರದ ನಿರ್ದೇಶಕ ಶಂಕರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ದಿನ ನಿತ್ಯ ಸುಮಾರು ೧೫೦ ರಿಂದ ೨೦೦ ಜನ ಚಿತ್ರೀಕರಣದಲ್ಲಿ ಭಾಗಿಯಾಗಿರುತ್ತೇವೆ. ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡುತ್ತಿರುವ ನಿರ್ಮಾಪಕಿ ಪ್ರತಿಭಾ ನರೇಶ್ ಅವರಿಗೆ ಹಾಗೂ ಸಹಕಾರ ನೀಡುತ್ತಿರುವ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ.

ನಿರ್ದೇಶಕರು ಹೇಳಿದ ಹಾಗೆ ಮಾರ್ಕೆಟ್ ನಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು. ಹಿರಿಯ ನಟರೊಂದಿಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಮಾರ್ಕೆಟ್ ನಲ್ಲಿ ಎಲ್ಲಾ ಕೆಲಸಗಳು ವೇಗವಾಗಿ ನಡೆಯುತ್ತಿರುತ್ತದೆ. ನನ್ನ ಪಾತ್ರ ಕೂಡ ಅದೇ ರೀತಿ. ಹಾಗಾಗಿ ಚಿತ್ರಕ್ಕೆ “ಚೀತಾ” ಎಂದು ಹೆಸರಿಡಲಾಗಿದೆ. ಚಿತ್ರದ ಕಥೆಯೂ ತುಂಬಾ ಚೆನ್ನಾಗಿದೆ ಎಂದರು ನಾಯಕ ಪ್ರಜ್ವಲ್ ದೇವರಾಜ್.

ನಾನು ನಿರ್ದೇಶಕರ ನಟ. ಅವರು ಹೇಳಿದ ಹಾಗೆ ಮಾಡುತ್ತಿದ್ದೇನೆ. ಹಿಂದೆ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದೆ. ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದಾಗಿ ಹಿರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ತಿಳಿಸಿದರು.

ನಾಯಕಿ ಮೇಘ ಶೆಟ್ಟಿ ಕೂಡ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟರಾದ ಶಿವರಾಜ್ ಕೆ ಆರ್ ಪೇಟೆ, ಸಿದ್ಲಿಂಗು ಶ್ರೀಧರ್, ಟೆನ್ನಿಸ್ ಕೃಷ್ಣ, ಶಂಕರ್, ಬೇಬಿ ಲೇಖನ ಹಾಗೂ ಛಾಯಾಗ್ರಾಹಕ ಗುರುಪ್ರಸಾದ್ “ಚೀತಾ” ಕುರಿತು ಮಾತನಾಡಿದರು. ನಿರ್ಮಾಪಕಿ ಪ್ರತಿಭಾ ನರೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Similar Posts

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments